ದೇಶ

ಕಾಶ್ಮೀರ: ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ, ಗಡಿ ನುಸುಳುವಿಕೆ ಯತ್ನ ವಿಫಲ

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಸೇನೆ, ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ವಕ್ತಾರರ ಪ್ರಕಾರ, ಒಳನುಸುಳುವಿಕೆ ಯತ್ನಗಳ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಕುಪ್ವಾರದ ತಂಗ್‌ಧರ್ ಸೆಕ್ಟರ್‌ನ ದಖೇನ್-ಅಮ್ರೋಹಿ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದವು.

"ಕಾರ್ಯಾಚರಣೆಯ ಸಮಯದಲ್ಲಿ, ನಮ್ಮ ಕಡೆಗೆ ನುಸುಳಲು ಪ್ರಯತ್ನಿಸುತ್ತಿರುವ ಉಗ್ರರ ಚಲನವಲನವನ್ನು ಗಮನಿಸಲಾಯಿತು. ನಮ್ಮ ಪೊಲೀಸರು ಮತ್ತು ಸೇನೆಗೆ ಸವಾಲು ಹಾಕಿದ ಉಗ್ರರಲ್ಲಿ ಓರ್ವನನ್ನು ಹತ್ಯೆ ಮಾಡಲಾಯಿತು" ಎಂದು ಅವರು ಹೇಳಿದ್ದಾರೆ.

ಇತರ ಎರಡರಿಂದ ಮೂರು ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ ಪಾಕಿಸ್ತಾನದ ಕಡೆಗೆ ಹಿಂತಿರುಗಿದರು ಎಂದು ವಕ್ತಾರರು ತಿಳಿಸಿದ್ದಾರೆ.

'ಸೇನೆ ಮತ್ತು ಕುಪ್ವಾರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ತಂಗ್‌ಧರ್ ಸೆಕ್ಟರ್‌ನ ಅಮ್ರೋಹಿ ಪ್ರದೇಶದ ಎಲ್‌ಒಸಿಯಲ್ಲಿ ಭಯೋತ್ಪಾದಕನನ್ನು ಹತ್ಯೆ ಮಾಡುವ ಮೂಲಕ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಉಗ್ರನಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು' ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

SCROLL FOR NEXT