ಕೋಲ್ಕತ್ತಾ: ಮಣಿಪುರದಲ್ಲಿ ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ, ಅವರ ಸರ್ಕಾರವು 'ಪಿಎಂ ಕೇರ್ ಫಂಢ್', 'ರಫೇಲ್ ಡೀಲ್' ಮತ್ತು 'ನೋಟು ಅಮಾನ್ಯೀಕರಣ'ದಂತಹ ಸಮಸ್ಯೆಗಳಿಂದ ತುಂಬಿಹೋಗಿದೆ' ಎಂದು ಅವರು ಹೇಳಿದರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಲ್ಲಿ ನಡೆದ ಜಿ20 ಭ್ರಷ್ಟಾಚಾರ ವಿರೋಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ ಕೆಲವೇ ಗಂಟೆಗಳ ನಂತರ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.
ದೇಶದ ಬಡ ಜನರು ಬದುಕುವುದು ಬಿಜೆಪಿಗೆ ಇಷ್ಟವಿಲ್ಲ. ಆದರೆ, ಪ್ರಧಾನಿಯವರು ಯಾವುದೇ ಪುರಾವೆಗಳಿಲ್ಲದೆ ಪ್ರತಿಪಕ್ಷಗಳನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದರು.
'ಪ್ರಧಾನಿ ದೇಶದ ದಾರಿ ತಪ್ಪಿಸುತ್ತಿದ್ದಾರೆ. ಅವರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮಾತನಾಡುತ್ತಿದ್ದಾರೆ. ಬಿಜೆಪಿಗೆ ದೇಶದಲ್ಲಿ ಯಾವುದೇ ಬಡವರು ಬದುಕುವುದು ಇಷ್ಟವಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ರಫೇಲ್ ಒಪ್ಪಂದ, ನೋಟು ಅಮಾನ್ಯೀಕರಣದಂತಹ ಹಲವಾರು ಭ್ರಷ್ಟಾಚಾರದ ಆರೋಪಗಳಿರುವುದರಿಂದ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಬ್ಯಾನರ್ಜಿ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೇವಲ 3 ನಿಮಿಷಗಳು!: ಪ್ರಧಾನಿ ಭಾಷಣದಲ್ಲಿ ಮಣಿಪುರದ ವಿಷಯಕ್ಕೆ ಮೀಸಲಿಟ್ಟ ಸಮಯದ ಬಗ್ಗೆ ಪ್ರತಿಪಕ್ಷಗಳ ಆಕ್ಷೇಪ!
ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಚರ್ಚೆಯನ್ನು ಪ್ರತಿಪಕ್ಷಗಳು ಬಯಸುವುದಿಲ್ಲ ಎಂಬ ಪ್ರಧಾನಿಯವರ ಆರೋಪವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಬ್ಯಾನರ್ಜಿ, 'ಈಶಾನ್ಯ ರಾಜ್ಯದಲ್ಲಿ ದೌರ್ಜನ್ಯಗಳಲ್ಲಿ ತೊಡಗಿರುವವರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಹೇಳಿದರು.
'ಪಶ್ಚಿಮ ಬಂಗಾಳದಲ್ಲಿಯೂ, ಗ್ರಾಮೀಣ ಚುನಾವಣೆಯ ಸಮಯದಲ್ಲಿ ಅವರು (ಬಿಜೆಪಿ) 15-16 ಜನರನ್ನು ಕೊಂದಿದ್ದಾರೆ. ಅಂತವರ ವಿರುದ್ಧ ಅವರು ಮೃದು ಧೋರಣೆಯನ್ನು ಹೊಂದಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.