ದೇಶ

ಪೋಕ್ಸೊ, SC/ST ಕಾಯಿದೆ ದುರ್ಬಳಕೆ ಹೆಚ್ಚುತ್ತಿದೆ: ಅಲಹಾಬಾದ್ ಹೈಕೋರ್ಟ್ ಕಳವಳ

Lingaraj Badiger

ಲಖನೌ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(ಪೋಕ್ಸೊ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ನಕಲಿ ದೂರುಗಳು ದಾಖಲಾಗುತ್ತಿದ್ದು, ಈ ಕಾನೂನುಗಳನ್ನು  ದುರ್ಬಳಕೆ ಮಾಡಿಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಲೈಂಗಿಕ ಅಪರಾಧಗಳನ್ನು ಎಸಗಿದ ಆರೋಪಿಗೆ ಜಾಮೀನು ನೀಡುವಾಗ, ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಹೀಗೆ ಹೇಳಿದ್ದಾರೆ... POCSO ಕಾಯ್ದೆ ಮತ್ತು SC/ST ಕಾಯ್ದೆಯಡಿಯಲ್ಲಿ ಕೆಲವು ಸುಳ್ಳು ಎಫ್‌ಐಆರ್‌ಗಳು ಅಮಾಯಕರ ವಿರುದ್ಧ ದಾಖಲಾಗಿವೆ... ಇದು ತುಂಬಾ ದುರದೃಷ್ಟಕರ. ಇತ್ತೀಚಿನ ದಿನಗಳಲ್ಲಿ, ಗರಿಷ್ಠ ಸಂದರ್ಭಗಳಲ್ಲಿ, ಮಹಿಳೆಯರು ಹಣವನ್ನು ದೋಚಲು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು ಎಂದಿದ್ದಾರೆ.

ಸೆಕ್ಷನ್ 376(ಅತ್ಯಾಚಾರ), 313, 504, 506 ಐಪಿಸಿ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 3/4 ರ ಅಡಿಯಲ್ಲಿ ಅಜಯ್ ಯಾದವ್ ವಿರುದ್ಧ ಕೇಸ್ ದಾಖಲಾಗಿದ್ದು, ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆಗಸ್ಟ್ 10 ರಂದು ತಮ್ಮ ಆದೇಶದಲ್ಲಿ ಹೀಗೆ ಹೇಳಿದ್ದಾರೆ... ರಾಜ್ಯ ಮತ್ತು ಕೇಂದ್ರ ಸರ್ಕಾರವೂ ವಿಷಯದ ಬಗ್ಗೆ ಸೂಕ್ಷ್ಮವಾಗಿ ವರ್ತಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ.

ಸಂತ್ರಸ್ತೆ ನೀಡಿದ ದೂರು ಸುಳ್ಳು ಎಂದು ಕಂಡುಬಂದಲ್ಲಿ, ವಿಚಾರಣೆಯ ನಂತರ ದೂರುದಾರರ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್(ಸಿಆರ್‌ಪಿಸಿ)ಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ದೂರು ನಿಷ್ಪ್ರಯೋಜಕವೆಂದು ಕಂಡುಬಂದಲ್ಲಿ ದೂರುದಾರರಿಗೆ ರಾಜ್ಯ ಸರ್ಕಾರ ನೀಡಿದ ಯಾವುದೇ ಹಣಕಾಸಿನ ಪರಿಹಾರವನ್ನು ಮತ್ತೆ ವಸೂಲಿ ಮಾಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಲೈಂಗಿಕ ಅಪರಾಧಗಳ ನಿಜವಾದ ಬಲಿಪಶುಗಳಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ, ಅಧಿಕಾರಿಗಳಿಗೆ ಆದೇಶಿಸಿದೆ.

SCROLL FOR NEXT