ದೇಶ

ಪುರುಷನಾಗಿ ಬದಲಾಗಲು ಬಯಸಿದ ಮಹಿಳಾ ಪೇದೆ: ಲಿಂಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸರ್ಕಾರದ ಗ್ರೀನ್ ಸಿಗ್ನಲ್!

Shilpa D

ಭೋಪಾಲ್​: ಪುರುಷನಾಗಿ ಬದಲಾಗುವ ಆಸೆ ವ್ಯಕ್ತಪಡಿಸಿ ಲಿಂಗ ಬದಲಾವಣೆ ಆಪರೇಷನ್​ ಮಾಡಿಸಿಕೊಳ್ಳಲು ಅನುಮತಿ ಕೋರಿದ್ದ ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ಗೆ ಮಧ್ಯಪ್ರದೇಶ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಿದೆ.

ಮಹಿಳಾ ಪೇದೆಯ ಹೆಸರು ದೀಪಿಕಾ ಕೋಥಾರಿ. ಇವರು ಮಧ್ಯಪ್ರದೇಶದ ರಾತ್ಲಮ್​ ಜಿಲ್ಲೆಯ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿನ ಗೃಹ ಇಲಾಖೆಗೆ ದೀಪಿಕಾ ಅವರು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವ ಗೃಹ ಇಲಾಖೆ ಲಿಂಗ ಬದಲಾವಣೆಗೆ ಅಸ್ತು ಎಂದಿದೆ.

ಆಕೆಯು ಸಲ್ಲಿಸಿದ್ದ ವೈದ್ಯಕೀಯ ವರದಿಗಳ ಆಧಾರದ ಮೇಲೆ ಲಿಂಗ ಬದಲಾವಣೆಗೆ ಅವಕಾಶ ನೀಡಲಾಗಿದೆ. ಡಾ. ರಾಜೀವ್​ ಶರ್ಮಾ ಎಂಬುವರು ಆಪರೇಷನ್​ ಮಾಡಲಿದ್ದಾರೆ.

ಸರ್ಕಾರಿ ನೌಕರರಿಗೆ ಲಿಂಗ ಬದಲಾವಣೆಯನ್ನು ಅನುಮತಿಸಲು ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಲಿಂಗ ಬದಲಾವಣೆಯ ಬಳಿಕ ದೀಪಿಕಾ ಅವರಿಗೆ ಮಹಿಳಾ ನೌಕರರಿಗೆ ಸಿಗುವ ಯಾವುದೇ ಸವಲತ್ತುಗಳು ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮತ್ತು ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಗಣಿಸಿದ ನಂತರ ಲಿಂಗ ಬದಲಾವಣೆಗೆ ಅನುಮತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

SCROLL FOR NEXT