ದೇಶ

"ಈ ಕಡೆ ಅಥವಾ ಆ ಕಡೆ", ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು- ಸುಪ್ರೀಂ ಕೋರ್ಟ್

Nagaraja AB

ನವದೆಹಲಿ: ‘ಈ ಕಡೆ ಅಥವಾ ಆ ಕಡೆ’ ಯಾವ ಕಡೆಯಾಗಲೀ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. 

ಇತ್ತೀಚಿನ ದೆಹಲಿ-ಎನ್‌ಸಿಆರ್ ಪ್ರದೇಶದ ನುಹ್-ಗುರುಗ್ರಾಮ್‌ನಲ್ಲಿ ಹಿಂಸಾಚಾರ ನಂತರ ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುತ್ತಿರುವ ಹಿಂದೂ ಸಂಘಟನೆಗಳ ವಿರುದ್ಧ ಕ್ರಮಕ್ಕಾಗಿ ಮನವಿ ಸೇರಿದಂತೆ ರಾಜ್ಯಾದ್ಯಂತ ದ್ವೇಷ ಭಾಷಣಗಳನ್ನು ತಡೆಯಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. 

ಕೇರಳದ ರಾಜಕೀಯ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜುಲೈನಲ್ಲಿ ರಾಜ್ಯದಲ್ಲಿ ರ‍್ಯಾಲಿಯೊಂದನ್ನು ಆಯೋಜಿಸಿತ್ತು. ಅಲ್ಲಿ "ಹಿಂದೂಗಳಿಗೆ ಸಾವು" ಎಂಬ ಘೋಷಣೆಗಳನ್ನು ಹಾಕಲಾಗಿತ್ತು ಎಂದು ವಕೀಲರೊಬ್ಬರು ಪೀಠದ ಮುಂದೆ ಪ್ರತಿಪಾದಿಸಿದರು. 

ನಾವು ತುಂಬಾ ಸ್ಪಷ್ಟವಾಗಿದ್ದೇವೆ. ಈ ಕಡೆ ಅಥವಾ ಆ ಕಡೆ, ಯಾರೇ ಆಗಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಮತ್ತು ಒಂದು ವೇಳೆ ಯಾರಾದರೂ ದ್ವೇಷಪೂರಿತ ಭಾಷಣದಲ್ಲಿ ತೊಡಗಿಸಿಕೊಂಡರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು, ಈಗಾಗಲೇ ನಾನು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ ಎಂದು ನ್ಯಾಯಪೀಠ ತಿಳಿಸಿತು.

ಬಿಹಾರ ಜಾತಿ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಈಗಾಗಲೇ ವಿಚಾರಣೆಗೆ ಪಟ್ಟಿ ಮಾಡಿರುವುದರಿಂದ ಸಮಯದ ಕೊರತೆಯಿಂದಾಗಿ ಪೀಠವು ಇಂದು ವಿಚಾರಣೆ ನಡೆಸಲು ಸಾಧ್ಯವಾಗಲ್ಲ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. ಎಲ್ಲಾ ದ್ವೇಷ ಭಾಷಣದ ವಿಷಯಗಳ ವಿಚಾರಣೆಯನ್ನು ಮುಂದಿನ ಶುಕ್ರವಾರ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿತು.
 

SCROLL FOR NEXT