ದೇಶ

ಶೇ. 93 ರಷ್ಟು ಮಾರ್ಗಗಳಲ್ಲಿ ಉಡಾನ್ ಯೋಜನೆ ಕೆಲಸ ಮಾಡಿಲ್ಲ ಎಂದು ಸಿಎಜಿ ವರದಿ ಹೇಳಿದೆ: ಖರ್ಗೆ

Lingaraj Badiger

ನವದೆಹಲಿ: ಕೇಂದ್ರದ ಪ್ರಮುಖ ಉಡಾನ್ ಯೋಜನೆಯು ಶೇ. 93 ರಷ್ಟು ಮಾರ್ಗಗಳಲ್ಲಿ ಕೆಲಸ ಮಾಡಿಲ್ಲ ಎಂದು ಸಿಎಜಿ ವರದಿಯೇ ಎತ್ತಿ ತೋರಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಿಕ್ಕಿದ್ದು ಕೇವಲ "ಸುಳ್ಳು" ಮತ್ತು "ಜುಮ್ಲಾ" ಗಳು ಮಾತ್ರ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಜನಸಾಮಾನ್ಯರಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡಲು 2016 ರ ಅಕ್ಟೋಬರ್ 21 ರಂದು ಉಡಾನ್ ಹೆಸರಿನಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು. 

ಚಪ್ಪಲಿ ಧರಿಸಿದವರಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವ ಮೋದಿ ಸರ್ಕಾರದ ಭರವಸೆ "ಅವರ ಎಲ್ಲಾ ಭರವಸೆಗಳಂತೆ" ಇದು ಸಹ ಈಡೇರಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ.

"ಇದನ್ನು ನಾವು ಹೇಳುತ್ತಿಲ್ಲ, ಸಿಎಜಿ ವರದಿಯೇ ಇದನ್ನು ಹೇಳುತ್ತಿದೆ! ಯೋಜನೆ(ಉಡಾನ್) ಶೇ. 93 ರಷ್ಟು ಮಾರ್ಗಗಳಲ್ಲಿ ಕೆಲಸ ಮಾಡಲಿಲ್ಲ. ವಿಮಾನಯಾನ ಸಂಸ್ಥೆಗಳ ಸ್ವತಂತ್ರ ಲೆಕ್ಕಪರಿಶೋಧನೆ ಕೂಡ ಮಾಡಲಾಗಿಲ್ಲ. ಹೆಚ್ಚು ಪ್ರಚಾರ ಮಾಡಿದ ಹೆಲಿಕಾಪ್ಟರ್ ಸೇವೆಗಳು ಸಹ ಸ್ಥಗಿತಗೊಂಡಿವೆ" ಎಂದು ಖರ್ಗೆ  ಆರೋಪಿಸಿದ್ದಾರೆ.

"ಉಡಾನ್' ಸಿಗಲಿಲ್ಲ, ಜನತೆಗೆ ಸಿಕ್ಕಿದ್ದು ಕೇವಲ ಸುಳ್ಳು ಭರವಸೆ ಮತ್ತು ಜುಮ್ಲಾಗಳು! ಅಂತಹ ಅಸಮರ್ಥ ಸರ್ಕಾರವನ್ನು ಭಾರತ ಈಗ ಕ್ಷಮಿಸುವುದಿಲ್ಲ!" ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

SCROLL FOR NEXT