ದೇಶ

ಲಡಾಖ್‌ನಲ್ಲಿ ಜನರ ಭೂಮಿಯನ್ನು ಚೀನಾ ಕಿತ್ತುಕೊಂಡಿದೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ಧಾಳಿ

Ramyashree GN

ಲಡಾಖ್: ಲಡಾಖ್‌ನಲ್ಲಿ ಚೀನಾವು ಜನರ ಭೂಮಿಯನ್ನು ಕಬಳಿಸಿದೆ ಎಂದು ಇಲ್ಲಿಗೆ ಭೇಟಿ ನೀಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

'ಚೀನಾ ಇಲ್ಲಿನ ಭೂಮಿಯನ್ನು ವಶಪಡಿಸಿಕೊಂಡಿದ್ದು, ಜನರು ತೀವ್ರ ತೊಂದರೆಗೊಳಗಾಗಿದ್ದಾರೆ. ಚೀನಾದ ಪಡೆಗಳು ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಿವೆ ಎಂದು ಜನರೇ ಹೇಳುತ್ತಿದ್ದಾರೆ' ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಪ್ರಧಾನಿ ಅವರು ಒಂದು ಇಂಚು ಭೂಮಿಯನ್ನು ಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ, ಇದು ನಿಜವಲ್ಲ. ಲಡಾಖ್‌ನಲ್ಲಿನ ಪರಿಸ್ಥಿತಿ ಅವರು ಹೇಳಿದಂತಿಲ್ಲ. ಕೇಂದ್ರಾಡಳಿತ ಪ್ರದೇಶದ ಜನರು ನಿರುದ್ಯೋಗ ಮತ್ತು ಹಣದುಬ್ಬರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ' ಎಂದು ಹೇಳಿದರು.

370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ನಂತರ ಲಡಾಖ್‌ಗೆ ನೀಡಲಾದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದ ಬಗ್ಗೆಯೂ ರಾಹುಲ್ ಗಾಂಧಿ ಪ್ರಶ್ನೆಗಳನ್ನು ಎತ್ತಿದರು.

'ಲಡಾಖ್‌ನಲ್ಲಿ ಜನರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ಪ್ರದೇಶಕ್ಕೆ ಕೊಟ್ಟ ಸ್ಥಾನಮಾನದಿಂದ ಜನರು ನೆಮ್ಮದಿಯಾಗಿಲ್ಲ. ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ಬೇಕಾಗಿದೆ ಮತ್ತು ನಿರುದ್ಯೋಗ ಕೂಡ ಕಳವಳಕಾರಿ ವಿಚಾರವಾಗಿದೆ. ನಮಗೆ ಜನಪ್ರತಿನಿಧಿಗಳು ಬೇಕು. ಅಧಿಕಾರಶಾಹಿಯಿಂದ ನಮ್ಮ ರಾಜ್ಯವನ್ನು ನಡೆಸಬಾರದು ಎಂದು ಹೇಳುತ್ತಿದ್ದಾರೆ' ಎಂದು ಸುದ್ದಿಗಾರರಿಗೆ ತಿಳಿಸಿದರು.

ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿದ ಅವರು, 'ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನಾನು ಲಡಾಕ್‌ಗೆ ಬರಬೇಕಿತ್ತು. ಆದರೆ, ಕೆಲವು ಲಾಜಿಸ್ಟಿಕ್ ಕಾರಣಗಳಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ನಂತರ ಇಲ್ಲಿಗೆ ಭೇಟಿ ನೀಡಲು ಮತ್ತು ಇಲ್ಲಿ ಹೆಚ್ಚು ಕಾಲ ಉಳಿಯಲು ಯೋಚಿಸಿದೆ. ಇದೀಗ ನಾನು ನಿಮ್ಮ ಸಮಸ್ಯೆಗಳನ್ನು ಆಲಿಸಲು ಇಲ್ಲಿಗೆ ಬಂದಿದ್ದೇನೆ. ನುಬ್ರಾ ಕಣಿವೆ ಮತ್ತು ಕಾರ್ಗಿಲ್‌ಗೆ ಭೇಟಿ ನೀಡುತ್ತೇನೆ' ಎಂದು ಹೇಳಿದರು.

ಪ್ಯಾಂಗೊಂಗ್ ಸರೋವರವು ಭೂಮಿಯ ಮೇಲಿನ ಅತ್ಯಂತ ಸುಂದರವಾದ ಸ್ಥಳ ಎಂದಿದ್ದ ರಾಜೀವ್ ಗಾಂಧಿ ಅವರೊಂದಿಗಿನ ಸಂಭಾಷಣೆಯನ್ನು ರಾಹುಲ್ ನೆನಪಿಸಿಕೊಂಡರು.

'ನನಗೆ ನೆನಪಿದೆ, ನಾನು ಚಿಕ್ಕವನಿದ್ದಾಗ ನನ್ನ ತಂದೆ ಒಮ್ಮೆ ಪ್ಯಾಂಗೊಂಗ್ ಸರೋವರಕ್ಕೆ ಭೇಟಿ ನೀಡಿ ಹಿಂತಿರುಗಿದರು ಮತ್ತು ಸರೋವರದ ಕೆಲವು ಚಿತ್ರಗಳನ್ನು ನನಗೆ ತೋರಿಸಿದರು. ಇದು ಭೂಮಿಯ ಮೇಲಿನ ಅತ್ಯಂತ ಸುಂದರವಾದ ಸ್ಥಳ ಎಂದು ನನಗೆ ಹೇಳಿದರು. 

ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು. 

ಮಾಜಿ  ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಲಡಾಖ್‌ನ ಪ್ಯಾಂಗೊಂಗ್ ಸರೋವರದ ತಟಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ, ತಮ್ಮ ತಂದೆಯ ಫೋಟೊ ಎದುರು ನಮನ ಸಲ್ಲಿಸಿದರು. 

ರಾಹುಲ್ ಗಾಂಧಿ ಅವರು ಲಡಾಖ್‌ನ ಪ್ಯಾಂಗೊಂಗ್ ಸರೋವರಕ್ಕೆ ಬೈಕ್ ಸವಾರಿ ನಡೆಸಿದ್ದು, ಆಗಸ್ಟ್ 25ರವರೆಗೆ ಲಡಾಖ್‌ನಲ್ಲಿ ಇರಲಿದ್ದಾರೆ.

SCROLL FOR NEXT