ದೇಶ

ವಿಶೇಷ ಅನಿಮೇಟೆಡ್ ಡೂಡಲ್‌ನೊಂದಿಗೆ ಚಂದ್ರಯಾನ-3 ಯಶಸ್ಸು ಸಂಭ್ರಮಿಸಿದ ಗೂಗಲ್

Lingaraj Badiger

ಬೆಂಗಳೂರು: ಸರ್ಚ್ ಇಂಜಿನ್ ದೈತ್ಯ ಗೂಗಲ್ ಗುರುವಾರ ಭಾರತದ ಚಂದ್ರಯಾನ-3 ಯಶಸ್ಸನ್ನು ವಿಶೇಷ ಅನಿಮೇಟೆಡ್ ಡೂಡಲ್‌ನೊಂದಿಗೆ ಸಂಭ್ರಮಿಸಿದೆ. ಈ ಮೂಲಕ ಚಂದ್ರಯಾನ-3 ಕಾರ್ಯಾಚರಣೆಯಲ್ಲಿ ಶ್ರಮ ವಹಿಸಿದ ಇಸ್ರೋ ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದೆ.

ಭಾರತದ ವಿಕ್ರಮ ಲ್ಯಾಂಡರ್ ಬುಧವಾರ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ವಿಶ್ವದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಪಾತ್ರವಾಗಿದೆ.

ಈ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ ಗೂಗಲ್ 'ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಅನ್ನು ಆಚರಿಸುವ' ಅನಿಮೇಟೆಡ್ ಡೂಡಲ್‌ ಆಗಿ ಚಿತ್ರಿಸಿದೆ.

ಭಾರತದ ಮೂರನೇ ಚಂದ್ರಯಾನ-3 ಭಾರತೀಯ ಕಾಲಮಾನ ನಿನ್ನೆ ಆಗಸ್ಟ್ 23 ರ ಬುಧವಾರ ಸಂಜೆ 6.04 ಕ್ಕೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಈ ಐತಿಹಾಸಿಕ ಸಾಧನೆಯೊಂದಿಗೆ, ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಪಾತ್ರವಾಗಿ ಇತಿಹಾಸ ನಿರ್ಮಿಸಿದೆ.

SCROLL FOR NEXT