ದೇಶ

69 ನೇ ರಾಷ್ಟ್ರೀಯ ಪ್ರಶಸ್ತಿಗಳು: 'ದಿ ಕಾಶ್ಮೀರ್ ಫೈಲ್ಸ್' ಆಯ್ಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ಕಿಡಿ!

Nagaraja AB

ಚೆನ್ನೈ: ಗುರುವಾರ ಪ್ರಕಟವಾದ 69 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್​’ ಅತ್ಯುತ್ತಮ ಭಾವೈಕ್ಯತೆಯ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ ಪ್ರಶ್ನಿಸಿದ್ದಾರೆ.  ಅಗ್ಗದ ರಾಜಕೀಯಕ್ಕಾಗಿ ರಾಷ್ಟ್ರ ಪ್ರಶಸ್ತಿಗಳ ಘನತೆಗೆ ಧಕ್ಕೆ ತರಬಾರದು ಎಂದು ಅವರು ಹೇಳಿದ್ದಾರೆ. 

ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಫೋಸ್ಟ್ ಮಾಡಿರುವ ತಮಿಳುನಾಡು ಆಡಳಿತಾರೂಢ ಡಿಎಂಕೆ ಅಧ್ಯಕ್ಷ ಸ್ಟಾಲಿನ್, ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ಪ್ರಶಸ್ತಿ ಗೆದ್ದಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಆಯಾ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ ಗಾಯಕಿ ಶ್ರೇಯಾ ಘೋಸಲ್, ಸಂಗೀತಗಾರ ಶ್ರೀಕಾಂತ್ ದೇವ ಮತ್ತು ಕಡೈಸಿ ವಿವಸಾಯಿ ಮತ್ತು ಸಿರ್ಪಿಗಳಿನ್ ಸಿರ್ಪಂಗಳ ತಂಡವನ್ನು ಅವರು ಶ್ಲಾಘಿಸಿದ್ದಾರೆ. 

ಮತ್ತೊಂದೆಡೆ, ಪಕ್ಷಾತೀತ ಚಿತ್ರ ವಿಮರ್ಶಕರು ವಿವಾದಾತ್ಮಕ ಎಂದು ಬಹಿಷ್ಕರಿಸಿದ ಚಿತ್ರಕ್ಕೆ ಅತ್ಯುತ್ತಮ ಭಾವೈಕ್ಯತೆಗಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ಘೋಷಿಸಿರುವುದು ಆಘಾತಕಾರಿಯಾಗಿದೆ ಎಂದು ದಿ ಕಾಶ್ಮೀರ ಫೈಲ್ ಚಿತ್ರದ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಸಾಹಿತ್ಯ ಕೃತಿಗಳು ಮತ್ತು ಚಲನಚಿತ್ರಗಳಿಗೆ ನೀಡುವ ಪ್ರಶಸ್ತಿಗಳು ರಾಜಕೀಯದಿಂದ ಮುಕ್ತವಾಗಿರಬೇಕು.  ಇದರಿಂದ ಮಾತ್ರ ಅವುಗಳ ಸ್ಥಾನಮಾನ ಹೆಚ್ಚಲಿದೆ.  ಅಗ್ಗದ ರಾಜಕೀಯಕ್ಕಾಗಿ ರಾಷ್ಟ್ರ ಪ್ರಶಸ್ತಿಗಳ ಘನತೆಗೆ ಚ್ಯುತಿ ತರಬಾರದು ಎಂದು ಸಿಎಂ ಹೇಳಿದ್ದಾರೆ. 

SCROLL FOR NEXT