ದೇಶ

ಚಂದ್ರಯಾನ-3 ರಿಂದ ಜಗತ್ತಿಗೆ ಭಾರತ ತನ್ನ ಸಾಮರ್ಥ್ಯ ತೋರಿಸಿದೆ: ಗ್ರೀಸ್ ನಲ್ಲಿ ಪ್ರಧಾನಿ ಮೋದಿ

Srinivas Rao BV

ಅಥೆನ್ಸ್: ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆ ಜಾಗತಿಕವಾಗಿ ಅಲೆಯನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. 

ಗ್ರೀಸ್ ನಲ್ಲಿರುವ ಭಾರತೀಯ ಮೂಲದ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ತಮ್ಮ ಸರ್ಕಾರ 9 ವರ್ಷಗಳಲ್ಲಿ ಸಾಧಿಸಿದ ಮೈಲಿಗಲ್ಲುಗಳನ್ನು ಹಂಚಿಕೊಂಡಿದ್ದು,  ಮೂಲಸೌಕರ್ಯ ಕ್ಷೇತ್ರ ಹಿಂದೆಂದೂ ಕಾಣದಷ್ಟು ಹೂಡಿಕೆಯನ್ನು ಪಡೆದಿದೆ ಎಂದು ಹೇಳಿದ್ದಾರೆ.

ಭೂಮಿ ಮತ್ತು ಚಂದ್ರನ ನಡುವಿನ ಅಂತರದ 6 ಪಟ್ಟು ಅಂತರದಷ್ಟು ಅಂದರೆ 25 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು 
2014 ರಿಂದ ಈ ವರೆಗೂ ಭಾರತದಲ್ಲಿ ಅಳವಡಿಸಲಾಗಿದೆ. ಭಾರತ ದಾಖಲೆಯ ಸಮಯದಲ್ಲಿ 700 ಕ್ಕೂ ಹೆಚ್ಚಿನ ಜಿಲ್ಲೆಗಳಿಗೆ ದೇಶೀಯವಾದ 5 ಜಿ ತಂತ್ರಜ್ಞಾನವನ್ನು ತಲುಪಿಸಿದೆ ಎಂದು ಮೋದಿ ಹೇಳಿದ್ದಾರೆ.

ವಿಶ್ವದ ಅತಿ ಎತ್ತರದ ರೈಲು ಸೇತುವೆ ಮತ್ತು ಮೋಟಾರು ರಸ್ತೆ ಜೊತೆಗೆ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮತ್ತು ಅತಿ ಎತ್ತರದ ಪ್ರತಿಮೆ ಈಗ ಭಾರತದಲ್ಲಿದೆ ಎಂದು ಮೋದಿ ಅನಿವಾಸಿ ಭಾರತೀಯ ಸಮುದಾಯಕ್ಕೆ ಹೇಳಿದ್ದಾರೆ. 

ವಿಶ್ವ ಬ್ಯಾಂಕ್ ಮತ್ತು IMF ನಂತಹ ಉನ್ನತ ಜಾಗತಿಕ ಸಂಸ್ಥೆಗಳು ಭಾರತೀಯ ಆರ್ಥಿಕತೆಯನ್ನು ಹೊಗಳುತ್ತಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ಪ್ರಮುಖ ಕಂಪನಿಗಳು ಪರಸ್ಪರ ಸ್ಪರ್ಧಿಸುತ್ತಿವೆ. ಕೋವಿಡ್ -19 ರ ನಂತರದ ವಿಶ್ವ ಕ್ರಮದಲ್ಲಿ ದೇಶದ ಪಾತ್ರವು ವೇಗವಾಗಿ ಬದಲಾಗುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು.

ಈ ವಾರದ ಆರಂಭದಲ್ಲಿ ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ಮಿಷನ್ ನಲ್ಲಿ ಯಶಸ್ವಿ ಲ್ಯಾಂಡಿಂಗ್ ನ್ನು ಉಲ್ಲೇಖಿಸಿದ ಮೋದಿ, ಭಾರತ ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದೆ ಎಂದು ಹೇಳಿದರು.

ಪ್ರಧಾನಮಂತ್ರಿಯವರು ಭಾರತ ಮತ್ತು ಗ್ರೀಸ್‌ನ ನಾಗರಿಕತೆಗಳ ನಡುವಿನ ಪ್ರಾಚೀನ ಸಂಬಂಧಗಳನ್ನು ಪ್ರಸ್ತಾಪಿಸಿದರು ಮತ್ತು ಅವರ ಸಂಬಂಧಗಳನ್ನು ಬಲಪಡಿಸುವಲ್ಲಿ ಸಿಖ್ ಗುರುಗಳ ಪಾತ್ರವನ್ನು ಶ್ಲಾಘಿಸಿದರು. ಸಿಖ್ಖರಿಗೆ ಸಂಬಂಧಿಸಿದ ಘಟನೆಗಳನ್ನು ಸ್ಮರಿಸುವಲ್ಲಿ ನಮ್ಮ ಸರ್ಕಾರ ಸಮರ್ಪಣೆಯೊಂದಿಗೆ ಕೆಲಸ ಮಾಡಿದೆ ಎಂದು ಪ್ರಧಾನಿ ಹೇಳಿದ್ದಾರೆ.

SCROLL FOR NEXT