ದೇಶ

ಮಹಾರಾಷ್ಟ್ರದ ಚಂದ್ರಪುರದಲ್ಲಿ ಜನವರಿಯಿಂದ ಜುಲೈ ವರೆಗೂ 73 ರೈತರು ಆತ್ಮಹತ್ಯೆ!

Srinivas Rao BV

ಚಂದ್ರಾಪುರ: 2023ಮಹಾರಾಷ್ಟ್ರದ ಚಂದ್ರಪುರದಲ್ಲಿ ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೂ 73 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕಳೆದ ಒಂದೇ ತಿಂಗಳಲ್ಲಿ 13 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಡಳಿತದ ಅಂಕಿ-ಅಂಶಗಳು ಹೇಳುತ್ತಿವೆ.
 
2001 ರಿಂದ 2023 ವರೆಗೆ ಈ ಜಿಲ್ಲೆಯಲ್ಲಿ 1,148 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಈ ಸಂಖ್ಯೆ 446 ನ್ನು ಮುಟ್ಟಿದೆ. 

ಜಿಲ್ಲಾಧಿಕಾರಿ, ಜಿಲ್ಲಾ ಪರಿಷತ್ ಸಿಇಒ ಹಾಗೂ ಎಸ್ಪಿ ಅವರನ್ನೊಳಗೊಂಡ ಸಮಿತಿಯ ಪ್ರಕಾರ 2001 ರಿಂದ 2022 ವರೆಗೆ ಆತ್ಮಹತ್ಯೆಗೆ ಶರಣಾಗಿರುವ 745 ರೈತರು ಪರಿಹಾರ ಪಡೆಯುವುದಕ್ಕೆ ಅರ್ಹರಾಗಿದ್ದು, 329 ರೈತರು ಅನರ್ಹರಾಗಿದ್ದಾರೆ.

ನಾವು ಆತ್ಮಹತ್ಯೆಗೆ ಶರಣಾಗಿರುವ ರೈತರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಲು 2006 ರ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರವು ನಿಗದಿತ ಮಾನದಂಡಗಳ ಆಧಾರದ ಮೇಲೆ ಪರಿಹಾರವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಬೆಳೆ ವೈಫಲ್ಯ, ಸಾಲ ಮರುಪಾವತಿ ಮಾಡುವುದಕ್ಕೆ ವಿಫಲರಾಗಿರುವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಈ ಪೈಕಿ 30,000 ರೂಪಾಯಿಗಳ ಹಣವನ್ನು ಅವರಿಗೆ ನೇರವಾಗಿ ನೀಡಲಾಗುತ್ತದೆ ಉಳಿದ 70,000 ರೂಪಾಯಿ ಹಣವನ್ನು ಅವರ ಖಾತೆಯಲ್ಲಿ 5 ವರ್ಷಗಳವರೆಗೆ ಠೇವಣಿ ಮಾಡಲಾಗುತ್ತದೆ.

ಈ ವರ್ಷ ಜೂನ್-ಜುಲೈನಲ್ಲಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 64,379 ರೈತರ ಒಟ್ಟು 54,514.65 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

SCROLL FOR NEXT