ದೇಶ

ಉತ್ತರ ಪ್ರದೇಶ: ಕೋರ್ಟ್ ಚೇಂಬರ್‌ನಲ್ಲಿ ವಕೀಲನಿಗೆ ಗುಂಡಿಕ್ಕಿ ಹತ್ಯೆ

Lingaraj Badiger

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ತಹಸಿಲ್ ನ್ಯಾಯಾಲಯದ ಸಂಕೀರ್ಣದಲ್ಲಿರುವ ಅವರ ಕೊಠಡಿಯಲ್ಲೇ ವಕೀಲರೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೋಜ್ ಚೌಧರಿ ಅಲಿಯಾಸ್ ಮೋನು ಜಾತ್ ಅವರು ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತಮ್ಮ ಚೇಂಬರ್‌ನಲ್ಲಿ ಊಟ ಮಾಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಕೋಣೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಮೋನು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ನಂತರ, ಪೊಲೀಸ್ ತಂಡ ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರು ನ್ಯಾಯಾಲಯದ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ(ನಗರ) ನಿಪುನ್ ಅಗರ್ವಾಲ್ ಅವರು ಹೇಳಿದ್ದಾರೆ.

ಹತ್ಯೆಯಾದ ವಕೀಲರ ಪತ್ನಿ ಕವಿತಾ ಚೌಧರಿ ಅವರು ಅಮಿತ್ ದಾಗರ್, ನಿತಿನ್ ದಾಗರ್ ಮತ್ತು ಅವರ ಸಹಚರರಾದ ಮದನ್ ದಾಗರ್, ಅನುಜ್ ಹಾಗೂ ಪಾಲೂ ಅಲಿಯಾಸ್ ಅಮಿತ್ ವಿರುದ್ಧ ದೂರು ನೀಡಿದ್ದು, ಅವರೆಲ್ಲರೂ ಶೂಟೌಟ್ ಸಮಯದಲ್ಲಿ ನ್ಯಾಯಾಲಯದ ಆವರಣದಲ್ಲಿದ್ದರು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಹೆಸರಿಸಲಾದ ಐವರ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಮತ್ತು 120ಬಿ (ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT