ದೇಶ

ಕಣ್ಣೂರು ವಿಶ್ವವಿದ್ಯಾಲಯದ ಉಪ ಕುಲಪತಿ ಮರು ನೇಮಕ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ/ತಿರುವನಂತಪುರ: ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ (VC) ಡಾ.ಗೋಪಿನಾಥ್ ರವೀಂದ್ರನ್ ಅವರ ಮರುನೇಮಕವನ್ನು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಅನಗತ್ಯ ಹಸ್ತಕ್ಷೇಪ ಎಂದು ಉಲ್ಲೇಖಿಸಿ ರದ್ದುಗೊಳಿಸಿದ್ದು, ಕೇರಳದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ದೊಡ್ಡ ಆಘಾತವಾಗಿದೆ. 

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು, ಕುಲಪತಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಉಪ ಕುಲಪತಿಯನ್ನು ಮರುನೇಮಕ ಮಾಡುವ ಶಾಸನಬದ್ಧ ಅಧಿಕಾರವನ್ನು ತ್ಯಾಗ ಮಾಡಿ ಶರಣಾಗಿದ್ದಾರೆ ಎಂದು ಹೇಳಿದರು. 

ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಂದ ಮರು ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜಭವನ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಮರು ನೇಮಕಕ್ಕೆ ಅಧಿಸೂಚನೆಯನ್ನು ಕುಲಪತಿಗಳಾದ ರಾಜ್ಯಪಾಲರು ಹೊರಡಿಸಿದ್ದರೂ, ಹೊರ ಪ್ರಭಾವದಿಂದ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜ್ಯ ಸರ್ಕಾರದ ಅನಗತ್ಯ ಹಸ್ತಕ್ಷೇಪದಿಂದ ನಿರ್ಧಾರವು ದುರ್ಬಲಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

ರವೀಂದ್ರನ್ ಅವರ ಮರುನೇಮಕವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠದ ತೀರ್ಪುಗಳನ್ನು ನಿನ್ನೆ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ನಾಲ್ಕು ಪ್ರಶ್ನೆಗಳನ್ನು ಪರಿಗಣಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದ್ದಾರೆ. ಆ ನಾಲ್ಕು ಪ್ರಶ್ನೆಗಳೆಂದರೆ: 

1. ಅಧಿಕಾರಾವಧಿಯ ಹುದ್ದೆಯಲ್ಲಿ ಮರು-ನೇಮಕವನ್ನು ಅನುಮತಿಸಲಾಗಿದೆಯೇ.
2. ಕಣ್ಣೂರು ವಿಶ್ವವಿದ್ಯಾನಿಲಯದ ಕಾಯಿದೆಯ ಸೆಕ್ಷನ್ 10(9) ರಲ್ಲಿ ನಿಗದಿಪಡಿಸಿದ 60 ವರ್ಷಗಳ ಗರಿಷ್ಠ ವಯಸ್ಸಿನ ಮಿತಿಯು ನಾಲ್ಕು ವರ್ಷಗಳ ಮರುನೇಮಕಾತಿಯ ಸಂದರ್ಭದಲ್ಲಿಯೂ ಅನ್ವಯಿಸುತ್ತದೆಯೇ.
3. ಆಯ್ಕೆ ಸಮಿತಿಯನ್ನು ಸ್ಥಾಪಿಸುವ ಮೂಲಕ ಉಪ ಕುಲಪತಿ ನೇಮಕಾತಿಯಂತೆಯೇ ಮರು-ನೇಮಕವನ್ನು ಅನುಸರಿಸಬೇಕೇ.
4. ಕುಲಪತಿಗಳು ಮರುನೇಮಕದ ಶಾಸನಬದ್ಧ ಅಧಿಕಾರವನ್ನು ತ್ಯಜಿಸಿದ್ದಾರೆಯೇ ಅಥವಾ ಒಪ್ಪಿಸಿದ್ದಾರೆಯೇ? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. 

SCROLL FOR NEXT