ದೇಶ

ಕೇರಳ ಸರಣಿ ಬಾಂಬ್ ಸ್ಫೋಟ ಪ್ರಕರಣ: ರಾಜೀವ್ ಚಂದ್ರಶೇಖರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಕೇರಳ ಹೈಕೋರ್ಟ್ ಆದೇಶ

Ramyashree GN

ಕೊಚ್ಚಿ: ಕಲಮಸ್ಸೇರಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೇಷಪೂರಿತ ಭಾಷಣದ ಆರೋಪದ ಮೇಲೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಡಿಸೆಂಬರ್ 14 ರವರೆಗೆ ಬಂಧನ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಕಲಮಸ್ಸೇರಿ ಸ್ಫೋಟದ ನಂತರ ಅವರ ವಿವಾದಾತ್ಮಕ ಹೇಳಿಕೆಗಳ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ಎರಡು ವಾರಗಳ ಕಾಲ ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ಹೈಕೋರ್ಟ್ ನಿಷೇಧಿಸಿದೆ.

ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ದಾಖಲಾದ ಎರಡು ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿಎಸ್ ಡಯಾಸ್ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ರಾಜೀವ್ ಚಂದ್ರಶೇಖರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟಿನ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಕೇಂದ್ರ ಸಚಿವರ ವಿರುದ್ಧ ಪೊಲೀಸರು ಹೇರಿರುವ ಆರೋಪ ನಿರಾಧಾರ ಮತ್ತು ರಾಜಕೀಯ ಪ್ರೇರಿತ ಎಂದರು.

ಕಲಮಸ್ಸೇರಿ ಸ್ಫೋಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಕ್ಕಾಗಿ ರಾಜೀವ್ ಚಂದ್ರಶೇಖರ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 14 ರಂದು ಹೈಕೋರ್ಟ್ ಮತ್ತೆ ಅರ್ಜಿಯ ವಿಚಾರಣೆ ನಡೆಸಲಿದೆ.

ಕಲಮಸ್ಸೇರಿಯಲ್ಲಿ ನಡೆದ ಸ್ಫೋಟದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಡೊಮಿನಿಕ್ ಮಾರ್ಟಿನ್ ಅವರ ಬಂಧನ ಅವಧಿಯನ್ನು ನ್ಯಾಯಾಲಯ ಡಿಸೆಂಬರ್ 26ರವರೆಗೆ ವಿಸ್ತರಿಸಿದೆ.

ಆರೋಪಿಯನ್ನು ಬುಧವಾರ ಬೆಳಗ್ಗೆ 11 ಗಂಟೆಯೊಳಗೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಆರೋಪಿ ಡೊಮಿನಿಕ್ ಮಾರ್ಟಿನ್ ನ್ಯಾಯಾಲಯಕ್ಕೆ ಹಾಜರಾದ ಮೇಲೆ ಯಾವುದೇ ಕಾನೂನು ಸಹಾಯವನ್ನು ನಿರಾಕರಿಸಿದರು. ಇದಕ್ಕೆ ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿತು. ಈ ಹಿಂದೆ, ನ್ಯಾಯಾಲಯವು ಆರೋಪಿಗೆ ಅವರು ಬಯಸಿದಲ್ಲಿ ಯಾವುದೇ ಸಮಯದಲ್ಲಿ ಕಾನೂನು ನೆರವು ಪಡೆಯಬಹುದು ಎಂದು ಹೇಳಿತ್ತು.

ತಿಂಗಳ ಹಿಂದೆ ಕೊಚ್ಚಿಯ ಕಲಮಸ್ಸೇರಿಯ ಜಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ಫೋಟದ ಹೊಣೆಯನ್ನು ಹೊತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಆಧರಿಸಿ ಕೊಚ್ಚಿ ಪೊಲೀಸರು ಮಾರ್ಟಿನ್‌ನನ್ನು ಬಂಧಿಸಿದ್ದಾರೆ. 

SCROLL FOR NEXT