ದೇಶ

ಉತ್ತರ ಪ್ರದೇಶ: ಬಡವರ ಮತಾಂತರಕ್ಕೆ ಯತ್ನ, 42 ಮಂದಿ ವಿರುದ್ಧ ಪ್ರಕರಣ, 9 ಮಂದಿ ಬಂಧನ

Srinivasamurthy VN

ಲಖನೌ: ಬಡವರ ಮತಾಂತರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಉತ್ತರ ಪ್ರದೇಶದಲ್ಲಿ 42 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸರು ಸೋನ್‌ಭದ್ರಾ ಜಿಲ್ಲೆಯಲ್ಲಿ ಬಡವರು ಮತ್ತು ಬುಡಕಟ್ಟು ಜನರನ್ನು ವಂಚನೆಯ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಆಮಿಷ ಒಡ್ಡಿದ ಆರೋಪದ ಮೇಲೆ 42 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, 42 ಮಂದಿಯ ಪೈಕಿ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಧಾರ್ಮಿಕ ಪುಸ್ತಕಗಳು, ಪ್ರಚಾರ ಸಾಮಗ್ರಿಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಜಿಲ್ಲೆಯ ಚೋಪಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಹಿಯಾ ತೋಲಾ ನಿವಾಸಿ ನರಸಿಂಗ್ ಎಂಬುವರು ಬುಡಕಟ್ಟು ಜನರು ಮತ್ತು ಬಡವರನ್ನು ವಂಚನೆಯ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲು ಸಿಂಗ್ ಹೇಳಿದ್ದಾರೆ.

ದೂರಿನ ಆಧಾರದ ಮೇಲೆ, ಗುರುವಾರ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ 42 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಂತರ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ತಮಿಳುನಾಡಿನ ಚೆನ್ನೈನ ಜೈಪ್ರಭು, ಉತ್ತರ ಪ್ರದೇಶದ ರಾಬರ್ಟ್ಸ್‌ಗಂಜ್‌ನ ಅಜಯ್ ಕುಮಾರ್ ಮತ್ತು ಆಂಧ್ರಪ್ರದೇಶದ ವಿಜಯವಾಡದ ಚೆಕ್ಕಾ ಇಮ್ಯಾನುಯೆಲ್ ಸೇರಿದ್ದಾರೆ.

ಉಳಿದ ಬಂಧಿತ ಆರೋಪಿಗಳನ್ನು ರಾಜೇಂದ್ರ ಕೋಲ್, ಛೋಟು ಅಲಿಯಾಸ್ ರಂಜನ್, ಪರಮಾನಂದ್, ಸೋಹನ್, ಪ್ರೇಮ್ ನಾಥ್ ಪ್ರಜಾಪತಿ ಮತ್ತು ರಾಮ್ ಪ್ರತಾಪ್ ಎಂದು ಗುರುತಿಸಲಾಗಿದೆ.
 

SCROLL FOR NEXT