ದೇಶ

ಜಾತಿ ಗಣತಿ ಪರ ಬ್ಯಾಟಿಂಗ್ ಮಾಡಿದ ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳ

Lingaraj Badiger

ನವದೆಹಲಿ: ನಮ್ಮ ಪಕ್ಷ ಜಾತಿ ಗಣತಿ ಪರವಾಗಿದೆ ಮತ್ತು ಮಿತ್ರಪಕ್ಷ ಬಿಜೆಪಿಗೂ ಇದು ತಿಳಿದಿದೆ ಎಂದು ಕೇಂದ್ರ ಸಚಿವೆ ಮತ್ತು ಅಪ್ನಾ ದಳ-ಸೋನೆಲಾಲ್ ಪಕ್ಷದ ಮುಖ್ಯಸ್ಥೆ ಅನುಪ್ರಿಯಾ ಪಟೇಲ್ ಅವರು ಶನಿವಾರ ಹೇಳಿದ್ದಾರೆ.

ಇಂದು ಉತ್ತರ ಪ್ರದೇಶದ ರಾಂಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನುಪ್ರಿಯಾ ಅವರು, "ಅಪ್ನಾ ದಳ-ಎಸ್ ಸಂಸತ್ತಿನ ಪ್ರತಿ ವೇದಿಕೆಯಲ್ಲಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ದ ಸಭೆಗಳಲ್ಲಿ ಜಾತಿ ಗಣತಿಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ನಾವು ಜಾತಿ ಗಣತಿಯ ಪರವಾಗಿದ್ದೇವೆ ಮತ್ತು ನಮಗೆ ಅದು ಬೇಕು. ನಮ್ಮ ನಿಲುವು ಸ್ಪಷ್ಟವಾಗಿದೆ. ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಇದರ ಸಂಪೂರ್ಣ ಅರಿವಿದೆ ಎಂದಿದ್ದಾರೆ.

ಜಾತಿವಾರು ಜನಗಣತಿ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿದ ಉತ್ತರಕ್ಕೆ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ಸದಸ್ಯರು ಉತ್ತರ ಪ್ರದೇಶ ವಿಧಾನ ಪರಿಷತ್ತಿನಿಂದ ಬುಧವಾರ ಹೊರ ನಡೆದಿದ್ದರು.

ರಾಜ್ಯ ಸರ್ಕಾರದ ಪರವಾಗಿ ಉತ್ತರಿಸಿದ ಉಪಮುಖ್ಯಮಂತ್ರಿ ಹಾಗೂ ಸಭಾನಾಯಕ ಕೇಶವ ಪ್ರಸಾದ್ ಮೌರ್ಯ ಅವರು, ''ಎಸ್‌ಪಿ ಸದಸ್ಯರು ಜಾತಿವಾರು ಜನಗಣತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅವರೆಲ್ಲರೂ ಹಿರಿಯರಾಗಿದ್ದು, ಈ ಗಣತಿ ಕೇಂದ್ರ ಸರ್ಕಾರ ನಡೆಸಲಿದೆ ಎಂಬುದು ಅವರಿಗೆ ತಿಳಿದಿದೆ. ಕೇಂದ್ರ ಸರ್ಕಾರ ಮತ್ತು ನಮ್ಮ ಹಿರಿಯ ನಾಯಕರು ಜಾತಿ ಗಣತಿಗೆ ವಿರುದ್ಧವಾಗಿಲ್ಲ ಎಂದು ಹೇಳಿದ್ದಾರೆ.

SCROLL FOR NEXT