ದೇಶ

ನಮ್ಮ ಒಬ್ಬ ಶಾಸಕರನ್ನು ಸಹ ಮುಟ್ಟಲು ಆಗುವುದಿಲ್ಲ: ತೆಲಂಗಾಣ ಚುನಾವಣಾ ಫಲಿತಾಂಶ ಕುರಿತು ಡಿಕೆ ಶಿವಕುಮಾರ್

Ramyashree GN

ಹೈದರಾಬಾದ್: ಬಹುತೇಕ ಎಕ್ಸಿಟ್ ಪೋಲ್ ಫಲಿತಾಂಶಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದೇ ಹೇಳಿದ್ದು, ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದೂ ಹೇಳಿದ್ದವು. ಆದರೆ ಇಂದು ನಡೆಯುತ್ತಿರುವ ಮತ ಎಣಿಕೆ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಬಹುತೇಕ ಸ್ಪಷ್ಟವಾದಂತೆ ತೋರುತ್ತಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕರ ಕುದುರೆ ವ್ಯಾಪಾರದ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ ಮತ್ತು ನಮ್ಮ ಒಬ್ಬ ಶಾಸಕರನ್ನು ಸಹ ಸೆಳೆಯಲು ಸಾಧ್ಯವಿಲ್ಲ ಎಂದು ಭಾನುವಾರ ತಿಳಿಸಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾವು ನಮ್ಮ ಎಲ್ಲಾ ಅಭ್ಯರ್ಥಿಗಳಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿದ್ದೇವೆ. ಅವರು ಸುರಕ್ಷಿತವಾಗಿದ್ದಾರೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ. ಒಬ್ಬ ಎಂಎಲ್ಎ ಅಥವಾ ಅಭ್ಯರ್ಥಿಯನ್ನು ಕೂಡ ಮುಟ್ಟಲು ಸಾಧ್ಯವಿಲ್ಲ. ಅವರ ರಾಜಕೀಯ ತಂತ್ರ ನಮಗೆ ತಿಳಿದಿದೆ. ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಿದ್ದೇವೆ. ನಾವು ಅದೇ ಅಜೆಂಡಾದಲ್ಲಿ ಇರುತ್ತೇವೆ' ಎಂದು ಹೇಳಿದರು.

ಆದಾಗ್ಯೂ, ತೆಲಂಗಾಣದಲ್ಲಿ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಮತ್ತು ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ) ನಡುವೆ ಯಾವುದೇ ಮೈತ್ರಿ ಇರುವುದಿಲ್ಲ ಎಂದು ಭರವಸೆ ನೀಡಿದರು.

'ತೆಲಂಗಾಣದ ಜನರು ಬದಲಾವಣೆಗೆ ನಿರ್ಧರಿಸಿದ್ದಾರೆ ಎಂದು ನಾವು ಭಾವಿಸುತ್ತೇವೆ. ನಾನು ತುಂಬಾ ಸಕಾರಾತ್ಮಕ ಮನಸ್ಥಿತಿಯಲ್ಲಿದ್ದೇನೆ. ನಾವು ಉತ್ತಮ ಆಡಳಿತದೊಂದಿಗೆ ಸರ್ಕಾರವನ್ನು ನೀಡುತ್ತೇವೆ. ನಮ್ಮ ಕೆಲವು ಅಭ್ಯರ್ಥಿಗಳೊಂದಿಗೆ ಈ ಪಕ್ಷ (ಬಿಆರ್‌ಎಸ್) ಮಾತನಾಡಿರುವುದಾಗಿ ತಿಳಿಸಿದ್ದಾರೆ' ಎಂದು ಡಿಸಿಎಂ ಹೇಳಿದರು.

ತೆಲಂಗಾಣದಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಉತ್ತರಿಸಿದ ಅವರು, ಪಕ್ಷವು ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆನಯನ್ನು ಎದುರಿಸಿದೆ ಮತ್ತು ಪಕ್ಷವು ಅದನ್ನು ಮುಂದುವರಿಸುತ್ತದೆ ಎಂದು ಸಮರ್ಥಿಸಿಕೊಂಡರು.

ಈಮಧ್ಯೆ, ಗುರುವಾರ ಚುನಾವಣೋತ್ತರ ಸಮೀಕ್ಷೆಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ನಿರೀಕ್ಷೆಯಿದೆ ಮತ್ತು ಭಾರತದ ಅತ್ಯಂತ ಕಿರಿಯ ರಾಜ್ಯದಲ್ಲಿ 10 ವರ್ಷಗಳ ಆಡಳಿತದ ನಂತರ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರದಿಂದ ಕೆಳಗಿಳಿಯಲಿದೆ ಎಂದು ಹೇಳಿದ್ದವು.

SCROLL FOR NEXT