ದೇಶ

ಮಿಜೋರಾಂ ವಿಧಾನಸಭಾ ಚುನಾವಣೆ: ಮತ ಎಣಿಕೆ ಆರಂಭ, 174 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

Manjula VN

ಐಜ್ವಾಲ್: ಪಂಚ ರಾಜ್ಯ ಚುನಾವಣೆಯ ಭಾಗವಾಗಿರುವ ಮಿಜೋರಂನ 40 ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು, 174 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಕ್ರೈಸ್ತರು ಹೆಚ್ಚಿರುವ ಮಿಜೋರಂನಲ್ಲಿ ಭಾನುವಾರ ಈಸ್ಟರ್ ಸಂಡೇ ವಿಶೇಷ ಆಚರಣೆ ಇದ್ದ ಕಾರಣ ಮತ ಎಣಿಕೆಯನ್ನು ಮುಂದೂಡಲಾಗಿತ್ತು. ಮಿಜೋರಂನಲ್ಲಿ ಎಂಎನ್ಎಫ್, ಕಾಂಗ್ರೆಸ್ ಹಾಗೂ ಬಿಜೆಪಿ, ಇತರೆ ಪಕ್ಷಗಳ ನಡುವೆ ಸ್ಪರ್ಧೆ ಇದೆ. ಇಲ್ಲಿ ಎಂಎನ್ಎಫ್ ಅಧಿಕಾರದಲ್ಲಿದೆ.

18 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ನಡೆದಿತ್ತು. ರಾಜ್ಯದ 8.57 ಲಕ್ಷ ಮತದಾರರಲ್ಲಿ 80 ಪ್ರತಿಶತಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ರಾಜ್ಯಾದ್ಯಂತ 13 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.

ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಈಗಾಗಲೇ 4 ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಿಜೋರಂನಲ್ಲಿ ಯಾರ ಪ್ರಭಾವ ಎಷ್ಟಿದೆ ಎನ್ನೋದು ಫಲಿತಾಂಶದ ನಂತರ ತಿಳಿದು ಬರಲಿದೆ.

SCROLL FOR NEXT