ದೇಶ

Cyclone Michaung: ಚೆನ್ನೈನಲ್ಲಿ 30 ಗಂಟೆಯಿಂದ ವಿದ್ಯುತ್ ಇಲ್ಲ; ಪರಿಸ್ಥಿತಿ ವಿವರಿಸಿದ ಆರ್ ಅಶ್ವಿನ್

Ramyashree GN

ಚೆನ್ನೈ: ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಿಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ನಗರದ ಜನರು ಎದುರಿಸುತ್ತಿರುವ ಸವಾಲಿನ ಪರಿಸ್ಥಿತಿಗಳನ್ನು ಎತ್ತಿ ತೋರಿಸಿದ್ದಾರೆ. ತಾವಿರುವ ಪ್ರದೇಶದಲ್ಲಿ 30 ಗಂಟೆಗಳಿಗೂ ಅಧಿಕ ಕಾಲದಿಂದ ವಿದ್ಯುತ್ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ.

ಮಿಚಾಂಗ್ ಚಂಡಮಾರುತವು ತಮಿಳುನಾಡು ಮತ್ತು ನೆರೆಯ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ.

ಮಂಗಳವಾರ ಮಳೆ ನಿಂತಿದ್ದರಿಂದ ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈ ಸ್ವಲ್ಪ ನಿಟ್ಟುಸಿರು ಬಿಟ್ಟಿದೆ. ಆದರೆ, ಭಾರಿ ಮಳೆಯಿಂದಾಗಿ ನಗರದ ತುಂಬೆಲ್ಲಾ ನೀರು ತುಂಬಿಕೊಂಡಿದ್ದು, ವಿದ್ಯುತ್ ಕಡಿತ ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿನ ಅಡಚಣೆಯನ್ನು ಎದುರಿಸುತ್ತಿದೆ.

'ನಾನಿರುವ ಪ್ರದೇಶದಲ್ಲಿ 30 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಇಲ್ಲ. ಹಲವೆಡೆ ಅದೇ ರೀತಿ ಇದೆ ಎಂದು ಊಹಿಸಿ. ನಮಗೆ ಚೆನ್ನೈ ಪ್ರವಾಹದಿಂದ ಬಚಾವಾಗಲು ಯಾವ ಆಯ್ಕೆಗಳಿವೆ ಎಂಬುದು ತಿಳಿದಿಲ್ಲ' ಎಂದು ಅಶ್ವಿನ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಚೆನ್ನೈ ನಿವಾಸಿಯಾಗಿರುವ ಅಶ್ವಿನ್ ಅವರು ನೀರಿನಿಂದ ತುಂಬಿರುವ ನಗರದ ಹಲವಾರು ವಿಡಿಯೋ ತುಣುಕುಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.

'ಇನ್ನೊಂದು ದಿನ ಎಲ್ಲರೂ ಸುರಕ್ಷಿತವಾಗಿರಿ, ಮಳೆ ನಿಂತರೂ, ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. #ChennaiRains2023 #Michaung' ಎಂದು ಸ್ಪಿನ್ನರ್ ಸೋಮವಾರ ಪೋಸ್ಟ್ ಮಾಡಿದ್ದು, ಹಾನಿಗೊಳಗಾದ ರಸ್ತೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಮಳೆ ಸಂಬಂಧಿತ ವಿವಿಧ ಘಟನೆಗಳಲ್ಲಿ ಕನಿಷ್ಠ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೀನುಗಾರಿಕಾ ದೋಣಿಗಳು ಮತ್ತು ಕೃಷಿ ಟ್ರ್ಯಾಕ್ಟರ್‌ಗಳ ಸಿಬ್ಬಂದಿ ನಗರದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವಲ್ಲಿ ತೊಡಗಿದ್ದಾರೆ.

SCROLL FOR NEXT