ದೇಶ

ಪಂಜಾಬ್‌: ಚೀನಾ ನಿರ್ಮಿತ ಪಾಕಿಸ್ತಾನದ ಡ್ರೋನ್ ವಶಪಡಿಸಿಕೊಂಡ ಬಿಎಸ್‌ಎಫ್

Ramyashree GN

ಫಿರೋಜ್‌ಪುರ: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಾಬೋಕೆ ಗ್ರಾಮದ ಬಳಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಚೀನಾ ನಿರ್ಮಿತ ಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಪಂಜಾಬ್ ಬಿಎಸ್‌ಎಫ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಕೃತ ಹೇಳಿಕೆ ಪ್ರಕಾರ, ಡಿಸೆಂಬರ್ 8 ರಂದು ರಾತ್ರಿ 10.10ಕ್ಕೆ ಮಾಬೋಕೆ ಗ್ರಾಮದ ಬಳಿ ಶಂಕಿತ ಡ್ರೋನ್‌ನ ಚಲನೆಯನ್ನು ಬಿಎಸ್‌ಎಫ್ ಗಮನಿಸಿದೆ. ಬಳಿಕ, ತಕ್ಷಣವೇ ಡ್ರೋನ್ ಮೇಲೆ ಗುಂಡು ಹಾರಿಸಿ ಕೆಳಗುರುಳಿಸಿದೆ.

ಅಲ್ಲದೆ, ಡಿಸೆಂಬರ್ 9ರ ಬೆಳಿಗ್ಗೆ ಹುಡುಕಾಟದ ಸಮಯದಲ್ಲಿ ಬಿಎಸ್‌ಎಫ್ ಪಡೆಗಳು ರೋಹಿಲ್ಲಾ ಹಾಜಿ ಗ್ರಾಮದ ಪಕ್ಕದ ಕೃಷಿ ಭೂಮಿಯಿಂದ ಸಣ್ಣ ಡ್ರೋನ್ ಅನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಡ್ರೋನ್ ಕ್ವಾಡ್‌ಕಾಪ್ಟರ್ (ಮಾಡೆಲ್- ಡಿಜೆಐ ಮಾವಿಕ್ 3 ಕ್ಲಾಸಿಕ್, ಚೀನಾದಲ್ಲಿ ತಯಾರಿಸಲ್ಪಟ್ಟಿದೆ) ಎಂದಿದೆ.

ಡ್ರೋನ್‌ಗಳ ಸಹಾಯದಿಂದ ಗಡಿಯಾಚೆಗಿಂದ ಭಾರತದ ಭೂಪ್ರದೇಶಕ್ಕೆ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನಗಳು ಆಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ. ವಿಶೇಷವಾಗಿ ಪಂಜಾಬ್ ರಾಜ್ಯದಲ್ಲಿ ಇದು ತೀವ್ರ ಸಮಸ್ಯೆಯಾಗಿದೆ. 

ಈ ವಾರದ ಆರಂಭದಲ್ಲಿ, ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಮೃತಸರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಅಧಿಕಾರಿಗಳ ಪ್ರಕಾರ, ಅಮೃತಸರದ ಧನೋ ಕಲನ್ ಗ್ರಾಮದ ಪಕ್ಕದ ಕೃಷಿ ಭೂಮಿಯಿಂದ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

'ನಿರ್ದಿಷ್ಟ ಗುಪ್ತಚರ ಮಾಹಿತಿ ಮೇರೆಗೆ ಪಂಜಾಬ್ ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಅಮೃತ್‌ಸರ ಜಿಲ್ಲೆಯ ಧಾನೋ ಕಲಾನ್ ಗ್ರಾಮದ ಸಮೀಪವಿರುವ ಕೃಷಿಭೂಮಿಯಿಂದ ಪಾಕಿಸ್ತಾನದ ಡ್ರೋನ್ (ಕ್ವಾಡ್‌ಕಾಪ್ಟರ್ - ಜಿಜೆಐ ಮಾವಿಕ್ 3 ಕ್ಲಾಸಿಕ್- ಚೀನಾದಲ್ಲಿ ತಯಾರಿಸಿದ್ದು) ಅನ್ನು ವಶಪಡಿಸಿಕೊಂಡಿದೆ' ಎಂದು ಬಿಎಸ್ಎಫ್ ತಿಳಿಸಿದೆ.

SCROLL FOR NEXT