ದೇಶ

ಮಹುವಾ ಸಂಸದ ಸ್ಥಾನದಿಂದ ಉಚ್ಚಾಟನೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಬಹುದು: ಕಾನೂನು ತಜ್ಞರು

Lingaraj Badiger

ನವದೆಹಲಿ: ಉಚ್ಚಾಟಿತ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕಿ ಮತ್ತು ಮಾಜಿ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ಭಾರತೀಯ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ. 

ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದಕ್ಕೆ ಲಂಚ ಪಡೆದ ಆರೋಪದ ಮೇಲೆ ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟಿಸಲಾಗಿದೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ ಸಿ ಕೌಶಿಕ್ ಅವರು, ಭಾರತೀಯ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ, ಮೊಯಿತ್ರಾ ಅವರು ಉಚ್ಚಾಟನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ.

ಮೂಲಭೂತ ಹಕ್ಕಾಗಿರುವ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಮೊಯಿತ್ರಾ ಖಂಡಿತವಾಗಿಯೂ ಸುಪ್ರೀಂಗೆ ಹೋಗಬಹುದು. ಸಂವಿಧಾನವು ಅಂಗೀಕರಿಸಿರುವ ತನ್ನ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಅನ್ನು ಸಂಪರ್ಕಿಸುವ ಹಕ್ಕು ಅವರಿಗೆ ಇದೆ ಎಂದಿದ್ದಾರೆ.

ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಆರ್ ಎಸ್ ಸೋಧಿ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು,  ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಪ್ರತಿಯೊಂದು ಕ್ರಮಕ್ಕೂ ಯಾವಾಗಲೂ ಪರಿಹಾರ ಲಭ್ಯವಿರುತ್ತದೆ. ಉಚ್ಚಾಟನೆಗೆ ಸರಿಯಾದ ಮತ್ತು ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ಗೆ ಹೇಳಬೇಕು ಮತ್ತು ಮನವಿ ಮಾಡಬೇಕು ಎಂದು ನ್ಯಾಯಮೂರ್ತಿ ಸೋಧಿ ತಿಳಿಸಿದ್ದಾರೆ.

SCROLL FOR NEXT