ದೇಶ

ಆರ್ಟಿಕಲ್ 370 ತೀರ್ಪು ಸ್ವಾಗತಿಸಿದ ಉದ್ಧವ್; ಆದ್ರೆ ಕಾಶ್ಮೀರಿ ಪಂಡಿತರು ಮರಳುವ ಬಗ್ಗೆ ಗ್ಯಾರಂಟಿ ನೀಡುವರೆ?

Lingaraj Badiger

ನಾಗಪುರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸೋಮವಾರ ಸ್ವಾಗತಿಸಿದ್ದಾರೆ. ಆದರೆ ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು "ಗ್ಯಾರಂಟಿ" ನೀಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆ ನಡೆಸಬೇಕು ಎಂದು ಮಹಾರಾಷ್ಟ್ರ ಮಾಜಿ ಸಿಎಂ ಆಗ್ರಹಿಸಿದ್ದಾರೆ.

"ಸುಪ್ರೀಂ ಕೋರ್ಟ್‌ನ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. 370ನೇ ವಿಧಿಯನ್ನು ರದ್ದುಗೊಳಿಸಿದಾಗ ನಾವು ಕೇಂದ್ರದ ಕ್ರಮವನ್ನು ಬೆಂಬಲಿಸಿದ್ದೇವೆ. ಮುಂದಿನ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ನಾವು ಸ್ವಾಗತಿಸುತ್ತೇವೆ. ಶೀಘ್ರದಲ್ಲೇ ಚುನಾವಣೆಗಳು ನಡೆಯುತ್ತವೆ ಮತ್ತು ಜನರು ಮುಕ್ತ ವಾತಾವರಣದಲ್ಲಿ ಮತ ಚಲಾಯಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಠಾಕ್ರೆ ವಿಧಾನ ಭವನದ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯದ ಎರಡನೇ ರಾಜಧಾನಿ ನಾಗ್ಪುರದಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ.

ಪಿಒಕೆ(ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಭಾರತದಲ್ಲಿ ವಿಲೀನಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಇದರಿಂದಾಗಿ ನಮ್ಮ ದೇಶದ ಬೇರ್ಪಡಿಸಲಾಗದ ಭಾಗವಾಗಿರುವ ಕಾಶ್ಮೀರದಲ್ಲಿ ಚುನಾವಣೆಗಳು ನಡೆಯುತ್ತವೆ ಎಂದು ಠಾಕ್ರೆ ಹೇಳಿದ್ದಾರೆ.

SCROLL FOR NEXT