ದೇಶ

ಪ್ರತಾಪ್ ಸಿಂಹ ಒಳ್ಳೆ ಉದ್ದೇಶದಿಂದ ಪಾಸ್ ಕೊಟ್ಟಿದ್ದಾರೆ, ಆದ್ರೆ ಮೂರು ಸಲ ನೀಡಿರುವುದು ಗೊತ್ತಿಲ್ಲ: ಪ್ರಹ್ಲಾದ್ ಜೋಶಿ

Lingaraj Badiger

ನವದೆಹಲಿ: ಲೋಕಸಭೆ ಕಲಾಪದ ವೇಳೆ ಭದ್ರಾತಾ ಲೋಪ ಘಟನೆ ಖಂಡನೀಯ. ಸಂಸದ ಪ್ರತಾಪ್ ಸಿಂಹ ಅವರು ಒಳ್ಳೆ ಉದ್ದೇಶದಿಂದ ಪಾಸ್ ಕೊಟ್ಟಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಗುರುವಾರ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೋಶಿ, ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪದ ಕುರಿತು ತನಿಖೆ ನಡೆಯುತ್ತಿದ್ದು, ಪ್ರತಾಪ್ ಸಿಂಹ ಅವರು ಯಾವ ಹಿನ್ನಲೆಯಲ್ಲಿ ಪಾಸ್ ಕೊಟ್ಟರು ಎಂಬ ಬಗ್ಗೆಯೂ ತನಿಖೆ ಆಗಲಿದೆ ಎಂದರು.

ಆರೋಪಿಗಳಿಗೆ ಪಾಸ್ ನೀಡಿದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, "ತನಿಖೆಯಿಂದ ಎಲ್ಲವೂ ಹೊರ ಬರಲಿದೆ.  ಮೈಸೂರಿನವರು ಎನ್ನುವ ಕಾರಣಕ್ಕೆ ಪಾಸ್ ಕೊಟ್ಟೆ ಎಂದು ಪ್ರತಾಪ್ ಸಿಂಹ ಅವರು ನನ್ನ ಬಳಿ ಹೇಳಿದ್ದಾರೆ. ಯಾರನ್ನು ಯಾವ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಕ್ಷೇತ್ರದ ಜನರು ಬಂದಾಗ ಪಾಸ್ ಕೊಡುವುದು ಸಹಜ. ಪಾಸ್ ಕೊಟ್ಟ ವಿಚಾರವೂ ತನಿಖೆಗೆ ಒಳಪಡಲಿದೆ. ಮೂರು ಸಲ ಪಾಸ್ ಪಡೆದಿರುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಅಮಾನತಿಗೆ ಪ್ರತಿಪಕ್ಷಗಳ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಮಹುವಾ ಮೊಯಿತ್ರಾ ಪ್ರಕರಣಕ್ಕೆ ಹೋಲಿಸಬೇಡಿ. ಇದು ಬೇರೆ ರೀತಿಯ ಪ್ರಕರಣ. ಜನಪ್ರತಿನಿಧಿಯಾಗಿ ಅವರು ಒಳ್ಳೆ ಉದ್ದೇಶದಿಂದ ಪಾಸ್ ಕೊಟ್ಟಿರುತ್ತಾರೆ. ಬೇರೆ ಉದ್ದೇಶಕ್ಕೆ ಬಳಕೆಯಾಗಿದೆ. ಎರಡನ್ನೂ ಹೋಲಿಸುವುದು ತಪ್ಪು. ಮಹುವಾ ಮೊಯಿತ್ರಾ ಪರವಾಗಿ ಬೇರೆಯವರು ಲಾಗಿನ್ ಮಾಡಿ ಪ್ರಶ್ನೆ ಕೇಳುತ್ತಾರೆ. ಇದನ್ನು ತನಿಖೆ ಮಾಡಿ ಅವರನ್ನು ಅಮಾನತು ಮಾಡಲಾಗಿದೆ ಎಂದರು.

ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಸಂಸತ್ ಸಂಕೀರ್ಣದಲ್ಲಿ ಕೆಲವು ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭದ್ರತಾ ಲೋಪದ ಸೂಕ್ಷ್ಮತೆಯನ್ನು ಒತ್ತಿಹೇಳಿದರು ಮತ್ತು ಈ ವಿಷಯದ ಬಗ್ಗೆ ವಿರೋಧ ಪಕ್ಷದ ನಾಯಕರೊಂದಿಗೆ ಯಾವುದೇ ರಾಜಕೀಯ ವಾಗ್ವಾದ ಮಾಡದಂತೆ ತಮ್ಮ ಸಚಿವ ಸಹೋದ್ಯೋಗಿಗಳಿಗೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಲ್ಲಿ ಒಬ್ಬರಾದ ಮನೋರಂಜನ್ ಡಿ ಅವರಿಗೆ ಪ್ರತಾಪ್ ಸಿಂಹ ಒಂದು ಬಾರಿ ಅಲ್ಲ ಮೂರು ಬಾರಿ ಪಾಸ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

SCROLL FOR NEXT