ದೇಶ

ಎಲೆಕ್ಟ್ರಾನಿಕ್ ಫ್ಯೂಜ್ ಖರೀದಿಗೆ 5,000 ಕೋಟಿ ರೂಪಾಯಿ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ

Srinivas Rao BV

ನವದೆಹಲಿ: ರಕ್ಷಣಾ ಸಚಿವಾಲಯ ಎಲೆಕ್ಟ್ರಾನಿಕ್ ಫ್ಯೂಜ್ ಖರೀದಿಗೆ 5,000 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದೆ. 

ಬಿಇಎಲ್ ಪುಣೆ ಸಂಸ್ಥೆಯೊಂದಿಗೆ ಒಪ್ಪಂದ ನಡೆದಿದ್ದು ಸೇನೆಗೆ ಈ ಸಂಸ್ಥೆ 10 ವರ್ಷಗಳ ಕಾಲ ಎಲೆಕ್ಟ್ರಾನಿಕ್ ಫ್ಯೂಜ್ ಗಳನ್ನು ಪೂರೈಕೆ ಮಾಡಲಿದೆ. ಭಾರತೀಯ ಸೈನ್ಯದ ಫಿರಂಗಿದಳದ ದೂರಗಾಮಿ-ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮವಾಗಿ ಸಚಿವಾಲಯ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಒಟ್ಟು ವೆಚ್ಚ 5,336.25 ಕೋಟಿ ರೂ ಆಗಿದೆ. 

ಇದೊಂದು ಮಹತ್ವದ ಒಪ್ಪಂದವಾಗಿದೆ ಎಂದು ಹೇಳಿರುವ ರಕ್ಷಣಾ ಸಚಿವಾಲಯ 'ಭಾರತೀಯ ಉದ್ಯಮದಿಂದ ಭಾರತೀಯ ಸೈನ್ಯಕ್ಕೆ ಮದ್ದುಗುಂಡುಗಳ ತಯಾರಿಕೆ', ಯೋಜನೆಯಡಿಯಲ್ಲಿ 10 ವರ್ಷಗಳ ದೀರ್ಘಕಾಲೀನ ಅವಶ್ಯಕತೆಗಾಗಿ ಸರ್ಕಾರದ ಉಪಕ್ರಮದ ಭಾಗವಾಗಿ ಸಹಿ ಹಾಕಲಾಗಿದೆ ಎಂದು ತಿಳಿಸಿದೆ.

"ಆಮದುಗಳನ್ನು ಕಡಿಮೆ ಮಾಡಲು, ಮದ್ದುಗುಂಡು ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು, ನಿರ್ಣಾಯಕ ತಂತ್ರಜ್ಞಾನಗಳನ್ನು ಪಡೆಯಲು ಮತ್ತು ಪೂರೈಕೆ ಸರಪಳಿ ಅಡ್ಡಿ ಪರಿಣಾಮ ಸಮಸ್ಯೆಯಾಗದಂತೆ ಎಚ್ಚರ ವಹಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. 

ಎಲೆಕ್ಟ್ರಾನಿಕ್ ಫ್ಯೂಜ್‌ಗಳು ಮಧ್ಯಮದಿಂದ ಭಾರೀ ಕ್ಯಾಲಿಬರ್ ಫಿರಂಗಿ ಬಂದೂಕುಗಳ ಅವಿಭಾಜ್ಯ ಅಂಶವಾಗಿದ್ದು, ಇದು ಮಿಲಿಟರಿ ಕಾರ್ಯಾಚರಣೆಗಳಿಗೆ ನಿರಂತರ ಫಿರಂಗಿ ಫೈರ್‌ಪವರ್ ನ್ನು ಒದಗಿಸುತ್ತದೆ. 

ಎಲೆಕ್ಟ್ರಾನಿಕ್ ಫ್ಯೂಜ್‌ಗಳನ್ನು ಪುಣೆಯ ಬಿಇಎಲ್ ಮತ್ತು ಮುಂಬರುವ ನಾಗ್ಪುರ ಸ್ಥಾವರದಲ್ಲಿ ತಯಾರಿಸುತ್ತದೆ. ಈ ಯೋಜನೆಯು ಒಂದೂವರೆ ಲಕ್ಷ ಮಂದಿಗೆ ಉದ್ಯೋಗ ನೀಡುತ್ತದೆ ಮತ್ತು ಮದ್ದುಗುಂಡು ತಯಾರಿಕೆಯಲ್ಲಿ ಎಂಎಸ್‌ಎಂಇಗಳು ಸೇರಿದಂತೆ ಭಾರತೀಯ ಕೈಗಾರಿಕೆಗಳ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.

SCROLL FOR NEXT