ದೇಶ

'ಗುಜರಾತ್ ಮಾದರಿ' ಅಸಲಿಯತ್ತು ಬಯಲು: 3 ವರ್ಷದಲ್ಲಿ 40,000ಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ!

Lingaraj Badiger

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಹೆಚ್ಚುತ್ತಿರುವ  ಅಪೌಷ್ಟಿಕತೆಯ ನಡುವೆ ಮಕ್ಕಳ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಏರಿಕೆಯಾಗಿದೆ ಮತ್ತು ತಾಯಂದಿರ ಆರೋಗ್ಯದ ಮೇಲೂ ಹಾನಿಯಾಗಿರುವುದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಒದಗಿಸಿದ ಅಂಕಿಅಂಶಗಳಿಂದ ಬಹಿರಂಗವಾಗಿದೆ.

ಪೌಷ್ಟಿಕತೆ ಪುನರ್ವಸತಿ ಕೇಂದ್ರಗಳಿಗೆ ದಾಖಲಾದ ಮಕ್ಕಳ ಸಂಖ್ಯೆಯಲ್ಲಿ ಗುಜರಾತ್ ಈಗ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಂಡಿದೆ. ಇದು ಅತ್ಯಂತ ಕಳವಳಕಾರಿಯಾಗಿದೆ.

ಗುಜರಾತ್ ರಾಜ್ಯದಲ್ಲಿ ಐದು ವರ್ಷದೊಳಗಿನ ಸಾವಿರಾರು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ(ಎಸ್‌ಎಎಂ) ಬಳಲುತ್ತಿದ್ದಾರೆ. ಈ ಪೈಕಿ 41,632 ಮಕ್ಕಳು ಕಳೆದ ಮೂರು ವರ್ಷಗಳಲ್ಲಿ ಪೌಷ್ಟಿಕತೆ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು ಲೋಕಸಭೆಗೆ ನೀಡಿದ ಅಂಕಿಅಂಶಗಳು ತಿಳಿಸಿವೆ.

ಲೋಕಸಭೆಯಲ್ಲಿ ಸಂಸದರಾದ ಧನುಷ್ ಎಂ ಕುಮಾರ್ ಮತ್ತು ಸೆಲ್ವಂ ಜಿ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವಾಲಯ, 2020-21ನೇ ಸಾಲಿನಲ್ಲಿ ದೇಶಾದ್ಯಂತದ 29 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ಸಂಖ್ಯೆ 1.04 ಲಕ್ಷ ಇತ್ತು ಎಂದು ತಿಳಿಸಿದೆ.

ಈ ಗುಜರಾತ್‌ನಲ್ಲಿಯೇ  2020-21ರಲ್ಲಿ 9,606, 2021-22ರಲ್ಲಿ 13,048 ಮತ್ತು 2022-23ರಲ್ಲಿ 18,978 'ತೀವ್ರ ಅಪೌಷ್ಟಿಕತೆ' ಪ್ರಕರಣಗಳು ಕಂಡುಬಂದಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

2021-22ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 1.32 ಲಕ್ಷ ಇತ್ತು. 2022-23ರಲ್ಲಿ ಅದು 1.89 ಲಕ್ಷಕ್ಕೆ ಮತ್ತು 2023-24ರಲ್ಲಿ 56,000ಕ್ಕೆ (ಜೂನ್ 2023 ರವರೆಗೆ) ಏರಿಕೆಯಾಗಿದೆ.

ಗುಜರಾತ್‌ ನಲ್ಲಿ 2023ರ ಜೂನ್ ವರೆಗೆ 5694 ಮಕ್ಕಳನ್ನು ಪೌಷ್ಟಿಕತೆ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಲಾಗಿದ್ದು, ಇದು ಆ ರಾಜ್ಯದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹದಗೆಡುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

SCROLL FOR NEXT