ದೇಶ

ಸಂಸತ್ತು ಭದ್ರತೆ ಉಲ್ಲಂಘನೆ ಗಂಭೀರ ಪ್ರಕರಣ, ಈ ವಿಷಯದಲ್ಲಿ ಜಗಳವಾಡುವುದು ಬೇಡ: ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣ ಒಂದು ಗಂಭೀರ ಘಟನೆಯಾಗಿದ್ದು,  ಅದನ್ನು ಅಸಡ್ಡೆ ಮಾಡಲು ಸಾಧ್ಯವೇ ಇಲ್ಲ, ಈ ವಿಷಯದಲ್ಲಿ ಜಗಳ ಬೇಡ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಹಿಂದಿ ದೈನಿಕ ದೈನಿಕ್ ಜಾಗರಣ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ತನಿಖಾ ಸಂಸ್ಥೆಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿವೆ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಮೋದಿ ಹೇಳಿದರು, ಈ ಘಟನೆ ನಡೆಸಿರುವ ಜನರು ಮತ್ತು ಅವರ ಉದ್ದೇಶಗಳ ಮೂಲಕ್ಕೆ ಹೋಗಿ ತನಿಖೆ ನಡೆಸುವುದು ಅತ್ಯಗತ್ಯ ಎಂದರು. 

ಸಂಸತ್ತಿನ ಭದ್ರತಾ ಉಲ್ಲಂಘನೆಯು ಅತ್ಯಂತ ನೋವಿನ ಕಳವಳಕಾರಿ ವಿಷಯ. ಸಾಂಘಿಕ ಮನೋಭಾವದಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು.ಇಂತಹ ವಿಚಾರದಲ್ಲಿ ಕಿತ್ತಾಡಿಕೊಳ್ಳಬಾರದು ಎಂದು ಮೋದಿ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. 

ಸಂಸತ್ತಿನಲ್ಲಿ ಸಂಭವಿಸಿದ ಘಟನೆಯ ಗಂಭೀರತೆಯನ್ನು ನಿರ್ಲಕ್ಷಿಸಬಾರದು. ಸ್ಪೀಕರ್ ಕೂಡ ಗಂಭೀರತೆಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಂಸತ್ತಿನ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಹಾರಿ ದಾಂಧಲೆ ನಡೆಸಿದ್ದು, ವಿರೋಧ ಪಕ್ಷಗಳು ಸದನದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರ ಹೇಳಿಕೆಗೆ ಒತ್ತಾಯಿಸುತ್ತಿದ್ದಾರೆ. ಕೆಲವು ಸದಸ್ಯರು ಶಾ ಅವರ ರಾಜೀನಾಮೆಗೆ ಕೂಡ ಒತ್ತಾಯಿಸಿದ್ದಾರೆ.

SCROLL FOR NEXT