ದೇಶ

ಹವಾಮಾನ: ಚಳಿಗೆ ಉತ್ತರ ಗಢಗಢ; ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ 8 ರಿಂದ 4 ಡಿಗ್ರಿಗೆ ತಾಪಮಾನ ಕುಸಿತ

Srinivasamurthy VN

ನವದೆಹಲಿ: ಉತ್ತರ ಭಾರತದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ತಾಪಮಾನ 8 ರಿಂದ 4 ಡಿಗ್ರಿಗೆ ಕುಸಿದಿದೆ.

ಈ ಕುರಿತು ಭಾರತದ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹಗಲಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಗರಿಷ್ಠ ತಾಪಮಾನವು 23 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಳ್ಳುವ ನಿರೀಕ್ಷೆಯಿದೆ. ತಾಪಮಾನ ಕನಿಷ್ಟ ಮಟ್ಟಕ್ಕೆ ಕುಸಿಯುತ್ತಿದ್ದು, ಮುಂಜಾನೆಯ ತಾಪಮಾನ 8ರಿಂದ 4 ಡಿಗ್ರಿಗೆ ಕುಸಿದಿತ್ತು ಎಂದು ಹೇಳಿದೆ.

ಬುಧವಾರ, ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶ, ವಾಯುವ್ಯ ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಉತ್ತರ ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಪಶ್ಚಿಮ ಬಿಹಾರದ ಪ್ರಮುಖ ಭಾಗಗಳಲ್ಲಿ ತಾಪಮಾನ 4-8 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.

ಮುಂದಿನ ನಾಲ್ಕೈದು ದಿನಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೆ, IMD ಮಂಗಳವಾರ ದಕ್ಷಿಣ ತಮಿಳುನಾಡು ಮತ್ತು ಲಕ್ಷದ್ವೀಪದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ವಾಯುವ್ಯ ಭಾರತದಲ್ಲೂ ತಾಪಮಾನ ಕುಸಿತ
ಇನ್ನು ಉತ್ತರ ಭಾರತ ಮಾತ್ರವಲ್ಲದೇ ವಾಯುವ್ಯ ಭಾರತದಲ್ಲೂ ತಾಪಮಾನ ಕುಸಿತವಾಗಿದೆ. ಪಂಜಾಬ್ ನ ಅಮೃತ್ ಸರದಲ್ಲಿ ತಾಪಮಾನ 4.3ಡಿಗ್ರಿಗೆ ಕುಸಿದಿದ್ದು, ಪಾಟಿಯಾಲದಲ್ಲಿ 5.4 ಡಿಗ್ರಿ, ಲೂಧಿಯಾನಾ 5.1 ಡಿಗ್ರಿ, ಅಂಬಾಲದಲ್ಲಿ 6.1 ಡಿಗ್ರಿ ದಾಖಲಾಗಿದೆ. ಅಂತೆಯೇ ಹರ್ಯಾಣದಲ್ಲಿ 5.1ರಿಂದ 6.2 ಡಿಗ್ರಿಗೆ ಕುಸಿದಿದ್ದು, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ 7.1 ಡಿಗ್ರಿಯಿಂದ 7.4ಡಿಗ್ರಿಗೆ ಕುಸಿದಿದ್ದು, ರಾಜಸ್ಥಾನದಲ್ಲಿ ಚುರುವಿನಲ್ಲಿ 3.5 ಡಿಗ್ರಿ ತಾಪಮಾನ ದಾಖಲಾಗಿದ್ದು, ಜೈಸಲ್ಮೇರ್ ನಲ್ಲಿ 7.3 ಡಿಗ್ರಿ ದಾಖಲಾಗಿದೆ. ಮಧ್ಯ ಪ್ರದೇಶದ ಅಂಬಿಕಾಪುರದಲ್ಲಿ 5.2 ಡಿಗ್ರಿ ತಾಪಮಾನ ದಾಖಲಾಗಿದ್ದು, ರೇವಾದಲ್ಲಿ 6.5 ಡಿಗ್ರಿ ತಾಪಮಾನ ದಾಖಲಾಗಿದೆ.

SCROLL FOR NEXT