ನವದೆಹಲಿ: ದೇಶದಾದ್ಯಂತ ಕ್ರಿಸ್'ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ಟ್ವೀಟ್ ಮಾಡಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿರುವ ಪ್ರಧಾನಿ ಮೋದಿಯವರು, ಎಲ್ಲರಿಗೂ ಮೇರಿ ಕ್ರಿಸ್ಮಸ್ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಸಂತೋಷ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ. ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಈ ಹಬ್ಬ ಸಂಕೇತಿಸುತ್ತದೆ. ಉತ್ತಮ ಸಮಾಜ ನಿರ್ಮಿಸಲು ಹಾಗೂ ಅಭಿವೃದ್ಧಿ ಕಡೆಗೆ ಕೆಲಸ ಮಾಡೋಣ. ಯೇಸು ಕ್ರಿಸ್ತನ ಬೋಧನೆಗಳನ್ನು ಸದಾ ನೆನಪಿಸಿಕೊಳ್ಳೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಅಜಾತಶತ್ರು' ವಾಜಪೇಯಿ ಜನ್ಮದಿನ: 'ಸದೈವ್ ಅಟಲ್' ಸ್ಮಾರಕಕ್ಕೆ ರಾಷ್ಟ್ರಪತಿ, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟ್ವೀಟ್ ಮಾಡಿ, ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು. ಈ ಸಂತೋಷದ ಹಬ್ಬವು ಸಾಮರಸ್ಯ, ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ಹರಡುತ್ತದೆ. ನಾವು ಯೇಸುಕ್ರಿಸ್ತನ ಬೋಧನೆಗಳನ್ನು ನೆನಪಿಸಿಕೊಳ್ಳೋಣ ಮತ್ತು ಎಲ್ಲರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಸಂಕಲ್ಪ ಮಾಡೋಣ ಎಂದು ತಿಳಿಸಿದ್ದಾರೆ.
ವಿಶ್ವದಾದ್ಯಂತ ಕ್ರಿಸ್'ಮಸ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾತ್ರಿಯಿಂದಲೇ ಚರ್ಚ್'ಗಳಿಗೆ ತೆರಳಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ. ಕ್ರಿಸ್'ಮಸ್ ಅಂಗವಾಗಿ ಚರ್ಚ್'ಗಳಿಗೆ ದೀಪಾಲಂಕಾಗಳನ್ನು ಮಾಡಲಾಗಿದ್ದು, ರಾತ್ರಿಯಿಂದಲೇ ಚರ್ಚ್'ಗಳಲ್ಲಿ ವಿಶೇಷ ಪ್ರವಚನ ನಡೆಸಲಾಗುತ್ತಿದೆ. ಯೇಸು ಪ್ರಭುವಿಗೆ ನಮನಗಳನ್ನು ಸಲ್ಲಿಸಲಾಗುತ್ತಿದೆ.