ದೇಶ

ಪತ್ನಿಯನ್ನು ತೊರೆದ ಮೋದಿ ರಾಮಮಂದಿರ ಉದ್ಘಾಟನೆಗೆ ಅರ್ಹರೇ?: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

Srinivasamurthy VN

ನವದೆಹಲಿ: ಅಯೋಧ್ಯೆ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ರಾಮಮಂದಿರ ಉದ್ಘಾಟನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ನಾಯಕರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವಂತೆಯೇ ಇತ್ತ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ  ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ಉದ್ಘಾಟನೆಯಾಗುತ್ತಿರುವುದನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, 'ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿ, ಕಷ್ಟಗಳನ್ನು ಎದುರಿಸಿದ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ಪತ್ನಿಯನ್ನೇ ತೊರೆದ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಉದ್ಘಾಟನಾ ಪೂಜೆ ಹೇಗೆ ನೆರವೇರಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

‘ರಾಮ ಸುಮಾರು ಒಂದೂವರೆ ದಶಕದಷ್ಟು ಕಾಲ ವನವಾಸವನ್ನು ಅನುಭವಿಸಿದ. ಅಪಹರಣಗೊಂಡ ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿದ. ಆದರೆ ಮೋದಿ ಅವರು ತಮ್ಮ ಪತ್ನಿಯನ್ನು ತ್ಯಜಿಸಿದವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಿದ್ದರೆ ಅವರು ಹೇಗೆ ಈ ಪೂಜೆ ನೆರವೇರಿಸುತ್ತಾರೆ? ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನು ಮೋದಿ ಅವರು ನೆರವೇರಿಸಲು ರಾಮನ ಭಕ್ತರು ಹೇಗೆ ಅವಕಾಶ ನೀಡುತ್ತಾರೆ’ ಎಂದೂ ಸುಬ್ರಮಣಿಯನ್ ಸ್ವಾಮಿ ಕೇಳಿದ್ದಾರೆ.

SCROLL FOR NEXT