ದೇಶ

ನಿವೇಶನ, ವೇತನ ಹೆಚ್ಚಳ ಸೇರಿ ನೌಕರರಿಗೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ ಟಿಟಿಡಿ! 

Srinivas Rao BV

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಮ್ ಟ್ರಸ್ಟ್ ತನ್ನ ನೌಕರರಿಗೆ ಹಲವು ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಘೋಷಿಸಿದೆ. 

ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಎರಡು ಹಂತಗಳಲ್ಲಿ ಟಿಟಿಡಿ ತನ್ನ 5,018 ನೌಕರರಿಗೆ ಮನೆ ನಿರ್ಮಿಸಿಕೊಳ್ಳುವುದಕ್ಕೆ ನಿವೇಶನವನ್ನು ಹಂಚಿಕೆ ಮಾಡಲಿದೆ.

ಮಂಗಳವಾರದಂದು ನಡೆದ ಟ್ರಸ್ಟ್ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಹಾಗೂ ಇಒ ಎವಿ ಧರ್ಮ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಟಿಟಿಡಿ ನೌಕರರಿಗೆ ನಿವೇಶನ ನೀಡುವುದಕ್ಕಾಗಿ ತಿರುಪತಿ ಜಿಲ್ಲೆಯಲ್ಲಿ 350 ಎಕರೆ ಪ್ರದೇಶವನ್ನು ಟ್ರಸ್ಟ್ ಖರೀದಿಸಲಿದೆ ಎಂದು ತಿಳಿಸಿದ್ದಾರೆ. 

5,000 ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಮುಂದಿನ ವರ್ಷ ಫೆಬ್ರವರಿ ವೇಳೆಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಭೂಮನ ರೆಡ್ಡಿ ಹೇಳಿದ್ದಾರೆ. 

ಫೆಬ್ರವರಿಯಲ್ಲಿ ನಡೆಯಲಿರುವ ಧಾರ್ಮಿಕ ಸದಸ್ ಗೆ ವಿವಿಧ ಹಿಂದೂ ಮಠಗಳು ಹಾಗೂ ಸಂಸ್ಥೆಗಳಿಂದ ಸನ್ಯಾಸಿಗಳು ಹಾಗೂ ಹಿಂದೂ ಸಂಸ್ಥೆಗಳ ಮುಖ್ಯಸ್ಥರನ್ನು ಆಹ್ವಾನಿಸಲಿದೆ ಎಂದು ಟಿಟಿಡಿ ಹೇಳಿದೆ. 

ಇದೇ ವೇಳೆ ಪ್ರಸಾದ, ಅಡುಗೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಹಾಗೂ ವಾಹನಗಳನ್ನು ನಿಭಾಯಿಸುವ ನೌಕರರಿಗೆ ಮಂಡಳಿ 10,000 ರೂಪಾಯಿಗಳಷ್ಟು ವೇತನ ಹೆಚ್ಚಿಸಲಿದೆ. ಇದಷ್ಟೇ ಅಲ್ಲದೇ ತಿರುಮಲದಲ್ಲಿರುವ ಕಲ್ಯಾಣಕಟ್ಟೆಯಲ್ಲಿ ಕ್ಷೌರಿಕರಿಗೆ 20,000 ರೂಪಾಯಿಗಳಷ್ಟು ಕನಿಷ್ಠ ವೇತನ ನೀಡಲಿದೆ. ಕುಶಲ ಕಾರ್ಮಿಕರ ವೇತನವನ್ನು 15,000 ರಿಂದ 18,500 ರೂಪಾಯಿಗಳಿಗೆ, ಅರೆ-ಕುಶಲಕರ್ಮಿಗಳ ವೇತನವನ್ನು 12,000 ರಿಂದ 15,000 ರೂಪಾಯಿಗಳಿಗೆ ಹಾಗೂ ಯಾವುದೇ ಕೌಶಲ್ಯವಿರದ ಇನ್ನಿತರ ನೌಕರರ ವೇತನವನ್ನು 10,340 ರಿಂದ 15,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ ಎಂದು ಟಿಟಿಡಿ ಹೇಳಿದೆ. 

ತಿರುಮಲದಲ್ಲಿ ಹೊಸ ಅತಿಥಿ ಗೃಹಗಳಾದ ಅಚ್ಯುತಮ್ ಹಾಗೂ ಶ್ರೀಪಥಮ್ ಗಳ ನಿರ್ಮಾಣಕ್ಕೆ 209.65 ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಗಳಿಗೆ ಟಿಟಿಡಿ ಅನುಮೋದನೆ ನೀಡಿದೆ ಎಂದು ಟ್ರಸ್ಟ್ ಹೇಳಿದೆ.

SCROLL FOR NEXT