ದೇಶ

ಮಹಾದಾಯಿ ನದಿ ವಿಚಾರದಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ: ಗೋವಾ ಸಿಎಂಗೆ ಕಾಂಗ್ರೆಸ್ 7 ದಿನ ಗಡುವು

Lingaraj Badiger

ಪಣಜಿ: ಮಹಾದಾಯಿ ನದಿ ವಿವಾದವನ್ನು ಬಿಜೆಪಿ ಬಗೆಹರಿಸಿ ಕರ್ನಾಟಕಕ್ಕೆ ನೀರು ನೀಡಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಒಂದು ವಾರದೊಳಗೆ ಖಂಡಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಗಡುವು ನೀಡಿದೆ.

ನದಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕ ರಾಜ್ಯಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿವೆ.

ಕರ್ನಾಟಕವು ನದಿ ನೀರು ಹಂಚಿಕೆ ಒಪ್ಪಂದಗಳನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಮುಂದುವರಿಯುತ್ತಿದೆ ಎಂದು ಗೋವಾ ಆಗಾಗ್ಗೆ ಆರೋಪಿಸುತ್ತಿದೆ.

ಈ ಸಂಬಂಧ ಇಂದು ನಡೆದ ಸಭೆಯಲ್ಲಿ ಪಕ್ಷದ ಗೋವಾ ಡೆಸ್ಕ್ ಇನ್ ಚಾರ್ಜ್ ಮಾಣಿಕಂ ಟ್ಯಾಗೋರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್, ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಮತ್ತು ದಕ್ಷಿಣ ಗೋವಾ ಸಂಸದ ಫ್ರಾನ್ಸಿಸ್ ಸರ್ದಿನ್ಹಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಟ್ಕರ್, ಗೋವಾ ಸಿಎಂ ಸಾವಂತ್ ಅವರು ಶುಕ್ರವಾರದೊಳಗೆ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಬೇಕು. ಇಲ್ಲದಿದ್ದರೆ "ರಾಜಕೀಯಕ್ಕಾಗಿ ಗೋವಾ ಕರ್ನಾಟಕಕ್ಕೆ ಮಹಾದಾಯಿ ನದಿಯನ್ನು ಮಾರಾಟ ಮಾಡಿದೆ" ಎಂದು ಸಾಬೀತಾಗಲಿದೆ ಎಂದು ಹೇಳಿದ್ದಾರೆ.

"ಗೋವಾ ಜನತೆಗೆ ಸಚಿವರು ನೀಡುವ ಹೇಳಿಕೆಗಳು ಸಾಕಾಗುವುದಿಲ್ಲ. ಗೋವಾ ಜನತೆ ಮಹಾದಾಯಿ ಸತ್ಯವನ್ನು ಪ್ರಮೋದ್ ಸಾವಂತ್ ಅವರ ಬಾಯಿಂದ ಮಾತ್ರ ತಿಳಿಯಲು ಬಯಸುತ್ತದೆ. ನಾವು ಅವರಿಗೆ ಒಂದು ವಾರದ ಸಮಯ ನೀಡುತ್ತೇವೆ" ಎಂದು ಪಾಟ್ಕರ್ ಸಭೆಯಲ್ಲಿ ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯವನ್ನು ಉಲ್ಲೇಖಿಸಿ ಹೇಳಿದರು.

SCROLL FOR NEXT