ದೇಶ

ಮುಂಬೈ ಸರ್ಕಾರಿ ಆಸ್ಪತ್ರೆಯಲ್ಲಿ ತೃತೀಯಲಿಂಗ ಸಮುದಾಯದ ರೋಗಿಗಳಿಗೆ ಮೀಸಲಾದ ಮೊದಲ ಒಪಿಡಿ ಉದ್ಘಾಟನೆ

Sumana Upadhyaya

ಮುಂಬೈ: ಮಹಾರಾಷ್ಟ್ರ ಸರ್ಕಾರದ ಗೋಕುಲದಾಸ್ ತೇಜ್‌ಪಾಲ್ (GT) ಆಸ್ಪತ್ರೆಯು ಮುಂಬೈನಲ್ಲಿ ಮೊದಲ ತೃತೀಯಲಿಂಗ ಸಮುದಾಯದ ರೋಗಿಗಳಿಗೆ ಅವರ ಮಾನಸಿಕ ಮತ್ತು ದೈಹಿಕ ಚಿಕಿತ್ಸೆಗಾಗಿ ಮೀಸಲಾದ ಮತ್ತು ಪ್ರತ್ಯೇಕ ಒಪಿಡಿ (ಹೊರ ರೋಗಿ ವಿಭಾಗ) ಯನ್ನು ಪ್ರಾರಂಭಿಸಿದೆ. 

ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಸಚಿವ ಗಿರೀಶ್ ಮಹಾಜನ್ ನಿನ್ನೆ ಜಿಟಿ ಆಸ್ಪತ್ರೆಯಲ್ಲಿ ಟ್ರಾನ್ಸ್‌ಜೆಂಡರ್ ವಾರ್ಡ್ ನ್ನು ಉದ್ಘಾಟಿಸಿದರು. ತೃತೀಯಲಿಂಗಿ ರೋಗಿಗಳಿಗೆ 30 ಹಾಸಿಗೆಗಳ ವಿಶೇಷ ಮತ್ತು ಮೀಸಲಾದ ವಾರ್ಡ್ ಪ್ರಾರಂಭವಾಗಿದೆ ಎಂದು ಪ್ರಕಟಿಸಿದರು. 

2019 ರ ತೃತೀಯಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಸಮುದಾಯಕ್ಕೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಅವರ ವಿರುದ್ಧ ಯಾವುದೇ ತಾರತಮ್ಯವು ಕಾನೂನಿನಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಸಚಿವರು ಹೇಳಿದರು, "ಒಂದು ಸಮುದಾಯವಾಗಿ ತೃತೀಯಲಿಂಗಿಗಳು ಸಮಾಜದಲ್ಲಿ ಸಾಕಷ್ಟು ತಾರತಮ್ಯ ಮತ್ತು ಅಸಮಾನತೆಯನ್ನು ಅನುಭವಿಸಿದ್ದಾರೆ.

ತೃತೀಯಲಿಂಗಿಗಳು ತಮ್ಮ ದೈಹಿಕ ಕಾಯಿಲೆಗೆ ಮಾತ್ರವಲ್ಲದೆ ಅವರ ಮಾನಸಿಕ ಯೋಗಕ್ಷೇಮಕ್ಕೂ ಚಿಕಿತ್ಸೆ ಪಡೆಯಬಹುದು. ನಾವು ಈಗಾಗಲೇ ನಮ್ಮ ಉದ್ಯೋಗಿಗಳಿಗೆ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ತರಬೇತಿ ಅವಧಿಗಳನ್ನು ನೀಡಿದ್ದೇವೆ ಎಂದರು.

ಜಿಟಿ ಆಸ್ಪತ್ರೆಯು ಅವರಿಗೆ ವಿಶೇಷ ವಾರ್ಡ್‌ಗಳನ್ನು ಒದಗಿಸಿದ ಮೊದಲ ಆಸ್ಪತ್ರೆಯಾಗಿದೆ. ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ, ನಾವು ಇತರ ಆಸ್ಪತ್ರೆಗಳಲ್ಲಿಯೂ ಇದೇ ರೀತಿಯ ವಾರ್ಡ್‌ಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು. 

ಸರ್ ಜೆಜೆ ಆಸ್ಪತ್ರೆಯ ಡೀನ್ ಡಾ ಪಲ್ಲವಿ ಸಪಲೆ ಅವರು ತೃತೀಯಲಿಂಗಿಗಳು ಎದುರಿಸುತ್ತಿರುವ ಆಘಾತವನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದು ಹೇಳಿದರು. “ತೃತೀಯಲಿಂಗಿಗಳು ನಮ್ಮ ಸಮುದಾಯದ ಭಾಗವಾಗಿದ್ದಾರೆ, ನಮ್ಮ ಸಂವಿಧಾನ ಅವರಿಗೆ ಹಕ್ಕುಗಳನ್ನು ನೀಡಿದೆ, ಆದ್ದರಿಂದ ಅವರನ್ನು ಇತರ ಲಿಂಗಗಳಂತೆ ಸಮಾನವಾಗಿ ಪರಿಗಣಿಸಬೇಕು, ಅವರಿಗೆ ಸರಿಯಾದ ಚಿಕಿತ್ಸೆ ಪಡೆಯುವ ಹಕ್ಕಿದೆ, ವಿಶೇಷ ವಾರ್ಡ್‌ಗಳಿಲ್ಲದ ಕಾರಣ ಅವರು ತುಂಬಾ ತೊಂದರೆ ಅನುಭವಿಸುತ್ತಾರೆ. ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂಬ ಗೊಂದಲದಲ್ಲಿದ್ದಾರೆ.ಪ್ರತ್ಯೇಕ ವಾರ್ಡ್‌ಗಳಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ನೀಡಬಹುದು.ವಾರ್ಡ್‌ನಲ್ಲಿ ಮಾನಸಿಕ ಆರೋಗ್ಯ ಸಮಾಲೋಚನೆಯೂ ಲಭ್ಯವಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ತೃತೀಯಲಿಂಗಿಗಳಿಗೆ ನಾವು ಮಾರ್ಗದರ್ಶಿ ಕಿರುಪುಸ್ತಕವನ್ನು ವಿತರಿಸಿದ್ದೇವೆ. ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗೆ ಸರಿಯಾದ ಕಾಳಜಿಯನ್ನು ನೀಡುವ ಮತ್ತು ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ತರಬೇತಿಯನ್ನು ನೀಡಿದ್ದೇವೆ. ಎರಡು ವೆಂಟಿಲೇಟರ್‌ಗಳು, ಮಾನಿಟರ್‌ಗಳನ್ನು ನೀಡಿದ್ದೇವೆ ಎಂದರು. 

ಅಗತ್ಯವಿದ್ದರೆ ಸಮಾಲೋಚನೆ ಮತ್ತು ಪುನರ್ವಸತಿಯನ್ನು ಸಹ ಒದಗಿಸಲಾಗುವುದು ಎಂದು ಡಾ ಸಪಲೆ ಹೇಳಿದರು.ರಾಜ್ಯ ಸರ್ಕಾರ ನಡೆಸುವ ವೈದ್ಯಕೀಯ ಆಸ್ಪತ್ರೆಗಳಲ್ಲಿ ಪುರುಷ ಮತ್ತು ಮಹಿಳೆ ಎಂಬ ಎರಡು ವರ್ಗಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಈಗ, ಮೂರನೇ ವರ್ಗವನ್ನು ಸಹ ಸೇರಿಸಲಾಗಿದೆ. ಆದ್ದರಿಂದ, ಈ ಸಮುದಾಯದ ಪ್ರತ್ಯೇಕ ದಾಖಲೆಗಳನ್ನು ನಾವು ಹೊಂದಿದ್ದೇವೆ ಎಂದರು.

SCROLL FOR NEXT