ದೇಶ

ಉತ್ತರ ಪ್ರದೇಶ: ಕಾರ್ಮಿಕರ ಮೇಲೆ ಹರಿದ ಸರ್ಕಾರಿ ಬಸ್; ನಾಲ್ವರು ಸಾವು, ಮೂವರಿಗೆ ಗಾಯ

Lingaraj Badiger

ಲಖನೌ: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಯುಪಿಎಸ್‌ಆರ್‌ಟಿಸಿ) ಬಸ್ ಬುಧವಾರ ತಡರಾತ್ರಿ ನೋಯ್ಡಾ ಬಳಿಯ ದಾದ್ರಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಖಾನೆಯ ಕಾರ್ಮಿಕರ ಮೇಲೆ ಹರಿದಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಒಟ್ಟು ಏಳು ಮಂದಿಗೆ ಬಸ್ ಡಿಕ್ಕಿ ಹೊಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ 11.30 ರ ಸುಮಾರಿಗೆ ಈ ಅಪಘಾತ ನಡೆದಿದೆ. ದಾದ್ರಿಯ ಬಾದಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರೋ ಮೋಟಾರ್ಸ್ ಮುಂಭಾಗದ ಜಿಟಿ ರಸ್ತೆಯನ್ನು ದಾಟುತ್ತಿದ್ದಾಗ ನೋಯ್ಡಾ ಡಿಪೋ ಸೇರಿದ ನೋಯ್ಡಾಗೆ ಹೋಗುವ ಬಸ್ ಕಾರ್ಖಾನೆಯ ಕಾರ್ಮಿಕರ ಮೇಲೆ ಹರಿದಿದೆ. ಗಾಯಾಳುಗಳನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಕಮಿಷನರ್(ಸೆಂಟ್ರಲ್ ನೋಯ್ಡಾ) ವಿಶಾಲ್ ಪಾಂಡೆ ಅವರು ತಿಳಿಸಿದ್ದಾರೆ.

ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಂತ್ರಸ್ತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಚಾಲಕನನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT