ದೇಶ

ಸಂಸತ್ತಿನ ಒಳಗೆ ಮತ್ತು ಹೊರಗೆ ಅದಾನಿ ವಿಷಯ ಪ್ರಸ್ತಾಪಿಸುತ್ತಲೇ ಇರುತ್ತೇವೆ, ಇದೊಂದು ದೊಡ್ಡ ಹಗರಣ: ಖರ್ಗೆ

Lingaraj Badiger

ನವದೆಹಲಿ: ಸಂಸತ್ತಿನ ಒಳಗೆ ಮತ್ತು ಹೊರಗೆ ಅದಾನಿ ವಿಷಯವನ್ನು ಕಾಂಗ್ರೆಸ್ ಪ್ರಸ್ತಾಪಿಸುತ್ತಲೇ ಇರುತ್ತದೆ. ಆದರೂ ಸರ್ಕಾರ ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡಲು ಸಿದ್ಧವಿಲ್ಲದಿದ್ದರೆ ಜನರೇ ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಅದಾನಿ ವಿವಾದ, ಸಂಸತ್ತಿನಲ್ಲಿ ತಮ್ಮ ಮತ್ತು ರಾಹುಲ್ ಗಾಂಧಿ ಅವರ ಕೆಲವು ಟೀಕೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಮುಂದಿಟ್ಟರು.

ಅದಾನಿ ವಿಷಯವು ಸಾರ್ವಜನಿಕ ಹಣವನ್ನು ಒಳಗೊಂಡಿರುವ ಅತಿ “ದೊಡ್ಡ ಹಗರಣ” ಎಂದು ಆರೋಪಿಸಿದ ಖರ್ಗೆ, ಅದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ತನಿಖೆಗೆ ಆದೇಶಿಸಲು ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ನಾನು ಮಾಡಿದ ಭಾಷಣದಲ್ಲಿ ಅಸಂಸದೀಯವಾಗಿ ಏನನ್ನೂ ಹೇಳಿಲ್ಲ ಮತ್ತು ಅದಾನಿ ವಿಷಯದ ಬಗ್ಗೆ ಕೆಲವು ಪ್ರಶ್ನೆಗಳನ್ನು ಮಾತ್ರ ಕೇಳಿದ್ದೇನೆ ಎಂದು ಖರ್ಗೆ ತಿಳಿಸಿದರು.

"ಅದಾನಿ ಗ್ರೂಪ್ ಮೇಲಿನ ಆರೋಪಗಳ ಬಗ್ಗೆ ಮೋದಿ ಸರ್ಕಾರವು ಜಂಟಿ ಸಂಸದೀಯ ಸಮಿತಿಯ ತನಿಖೆ ಏಕೆ ನಡೆಸುತ್ತಿಲ್ಲ? ಮೋದಿ ಜಿ ಮತ್ತು ಅವರ ಸರ್ಕಾರವು ಸಂಸತ್ತಿನಲ್ಲಿ 'ಅದಾನಿ' ಪದವನ್ನು(ಯಾರಿಗೂ) ಹೇಳಲು ಅವಕಾಶ ನೀಡದಿರುವುದಕ್ಕೆ ಕಾರಣವೇನು?" ಎಂದು ಪ್ರಶ್ನಿಸಿದರು.

"ಇಷ್ಟೊಂದು ದೊಡ್ಡ ಹಗರಣ ನಡೆದಿದ್ದರೂ ಆರ್‌ಬಿಐ, ಸೆಬಿ, ಇಡಿ, ಎಸ್‌ಎಫ್‌ಐಒ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಐಟಿ ಮತ್ತು ಸಿಬಿಐ ಏಕೆ ಇನ್ನೂ ಮೌನವಾಗಿವೆ. ತನಿಖೆ ಏಕೆ ನಡೆಸುತ್ತಿಲ್ಲ? ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದರು.

SCROLL FOR NEXT