ದೇಶ

ಹೊಸ ತೆರಿಗೆ ಪದ್ಧತಿ ಮಧ್ಯಮ ವರ್ಗದವರಿಗೆ ಲಾಭದಾಯಕ: ನಿರ್ಮಲಾ ಸೀತಾರಾಮನ್

Nagaraja AB

ನವದೆಹಲಿ: ಹೊಸ ತೆರಿಗೆ ಪದ್ಧತಿಯಲ್ಲಿ ಮಧ್ಯಮ ವರ್ಗದವರ ಕೈಯಲ್ಲಿ ಹೆಚ್ಚಿನ ಹಣವನ್ನು ಬಿಡುವುದರಿಂದ ಇದು ಅವರಿಗೆ ಲಾಭದಾಯಕವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಯೋಜನೆಗಳ ಮೂಲಕ ಹೂಡಿಕೆ ಮಾಡಲು ವ್ಯಕ್ತಿಗಳನ್ನು ಪ್ರೇರೇಪಿಸುವುದು ಅನಿವಾರ್ಯವಲ್ಲ ಆದರೆ ಹೂಡಿಕೆಯ ಬಗ್ಗೆ ವೈಯಕ್ತಿಕ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಗೆ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರಲಿರುವ ಪರಿಷ್ಕೃತ ರಿಯಾಯಿತಿ ತೆರಿಗೆ ಪದ್ಧತಿಯಡಿ ರೂ. 3 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ರೂ.3-6 ಲಕ್ಷದ ನಡುವೆ ಶೇ. 5 ರಷ್ಟು ತೆರಿಗೆ ವಿಧಿಸಲಾಗುತ್ತದೆ. ರೂ. 6-9 ಲಕ್ಷದ ನಡುವೆ ಶೇ. 10, ರೂ. 9-12 ಲಕ್ಷದ ನಡುವೆ ಶೇ. 15, ರೂ. 12-15 ಲಕ್ಷದ ನಡುವೆ ಶೇ. 20 ರಷ್ಟು ಮತ್ತು ರೂ. 15ಲಕ್ಷಕ್ಕೂ ಮೇಲ್ಪಟ್ಟ ಆದಾಯಕ್ಕೆ ಶೇ. 30 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದಾಗ್ಯೂ, 7 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದರು.

ಅದಾನಿ ಗ್ರೂಪ್ ಬಿಕ್ಕಟ್ಟಿನ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾರತೀಯ ನಿಯಂತ್ರಕರು ಬಹಳ ಅನುಭವಿಗಳು ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಪರಿಣಿತರು. ನಿಯಂತ್ರಕರು ಈ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದು ಹಣಕಾಸು ಸಚಿವರು ತಿಳಿಸಿದರು.

ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, 2023-24ರಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 5.3 ರಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಕಚ್ಚಾ ಬೆಲೆಗಳು ಸೌಮ್ಯವಾಗಿ ಉಳಿದರೆ ಮತ್ತಷ್ಟು ಕುಸಿಯಬಹುದು ಎಂದು ಹೇಳಿದರು.

ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರ ಅಂದಾಜಿಗಾಗಿ  ಆರ್‌ಬಿಐ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರವನ್ನು  95 ಅಮೆರಿಕನ್ ಡಾಲರ್ ಗೆ ನಿರೀಕ್ಷಿಸಿದೆ ಎಂದು ಅವರು ತಿಳಿಸಿದರು. 

SCROLL FOR NEXT