ದೇಶ

ಕೃಷಿ ಉಡಾನ್ ಯೋಜನೆಯಡಿ 21 ಹೊಸ ವಿಮಾನ ನಿಲ್ದಾಣಗಳನ್ನು ಸೇರಿಸಲು ಕೇಂದ್ರ ಸರ್ಕಾರ ಚಿಂತನೆ- ಜ್ಯೋತಿರಾಧಿತ್ಯ ಸಿಂಧಿಯಾ

Nagaraja AB

ಇಂದೋರ್: ಕೃಷಿ ಉಡಾನ್ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದ್ದು, ಈ ಯೋಜನೆಯಡಿ ಹೆಚ್ಚುವರಿಯಾಗಿ 21 ವಿಮಾನ ನಿಲ್ದಾಣಗಳನ್ನು ಸೇರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಮಂಗಳವಾರ ತಿಳಿಸಿದ್ದಾರೆ.

ಇಂದೋರ್ ನಲ್ಲಿ ನಡೆದ ಜಿ-20 ಕೃಷಿ ಪ್ರತಿನಿಧಿಗಳ ಸಭೆಯ ಎರಡನೇ ದಿನದ ಚರ್ಚೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧಿಯಾ, ಕನಿಷ್ಠ 31 ವಿಮಾನ ನಿಲ್ದಾಣಗಳು ಕೃಷಿ ಉಡಾನ್ ಯೋಜನೆಯಡಿ ಇವೆ. ಮತ್ತೆ 21 ವಿಮಾನ ನಿಲ್ದಾಣಗಳನ್ನು ಈ ಯೋಜನೆಯಡಿ ಸೇರಿಸಲು ರಕ್ಷಣಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು. 

ಕೃಷಿ ಉತ್ಪನ್ನಗಳ ತ್ವರಿತ ಸಾಗಣೆಯ ವಿಶೇಷ ವಿಮಾನವಾಗಿರುವ ಕೃಷಿ ಉಡಾನ್ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ನಿಂಬೆಹಣ್ಣು, ಹಲಸು, ದ್ರಾಕ್ಷಿ ಮತ್ತಿತರ ಬೆಳೆಗಳನ್ನು ದೇಶದ ಇತರ ಭಾಗಗಳಿಗೆ ಮಾತ್ರವಲ್ಲದೇ, ಜರ್ಮನಿ, ಲಂಡನ್, ಸಿಂಗಾಪುರ ಮತ್ತು ಫಿಲಿಫೈನ್ಸ್ ನಂತಹ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಎರಡು ದಿನಗಳ ಜಿ-20 ಕೃಷಿ ಪ್ರತಿನಿಧಿಗಳ ಸಭೆಯಲ್ಲಿ ಆಹಾರ ಭದ್ರತೆ, ಪೌಷ್ಟಿಕಾಂಶ, ಸುಸ್ಥಿರ ಕೃಷಿ ಮತ್ತು ಕೃಷಿ ಸಾಗಣಿಕೆ ವ್ಯವಸ್ಥೆ ಕುರಿತಂತೆ ಚರ್ಚೆ ಮುಂದುವರೆದಿದೆ. ನಾಳಿನ ಕೊನೆಯ ದಿನದ ಸಭೆಯಲ್ಲಿ ಕೃಷಿ ಕಾರ್ಯಕಾರಿ ಗುಂಪಿನೊಂದಿಗೆ ಪ್ರಮುಖ ವಿಚಾರ ಕುರಿತು ಪ್ರತಿನಿಧಿಗಳು ಸಮಾಲೋಚನೆ ನಡೆಸಲಿದ್ದಾರೆ.

SCROLL FOR NEXT