ದೇಶ

ಶೀಘ್ರದಲ್ಲೇ ದೇಶದಲ್ಲಿ ಯಾವುದೇ ಮಾಧ್ಯಮ ಇರುವುದಿಲ್ಲ: ಬಿಬಿಸಿ ಮೇಲೆ ಐಟಿ ದಾಳಿಗೆ ಮಮತಾ ಕಿಡಿ

Lingaraj Badiger

ಕೋಲ್ಕತಾ: ಬಿಬಿಸಿ ಇಂಡಿಯಾದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ(ದಾಳಿ) ಅತ್ಯಂತ ದುರದೃಷ್ಟಕರ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಸೇಡು ಎಂದು ಆರೋಪಿಸಿದ್ದಾರೆ.

"ಇದು ಅತ್ಯಂತ ದುರದೃಷ್ಟಕರ; ಇದು ಬಿಜೆಪಿ ಸರ್ಕಾರದ ರಾಜಕೀಯ ಸೇಡಿನ ಕ್ರಮವಾಗಿದೆ" ಎಂದು ಪಶ್ಚಿಮ ಬಂಗಾಳ ಅಸೆಂಬ್ಲಿಯಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"ಇಂತಹ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ, ಕೇಸರಿ ಪಕ್ಷವು ಮಾಧ್ಯಮವನ್ನು ನಿಯಂತ್ರಿಸುತ್ತಿದೆ. ಒಂದು ದಿನ ದೇಶದಲ್ಲಿ ಮಾಧ್ಯಮವೇ ಇಲ್ಲದಂತೆ ಮಾಡುತ್ತಾರೆ. ಅವರು(ಬಿಜೆಪಿ ನಾಯಕರು) ಜನಾದೇಶದ ಬಗ್ಗೆ ಕಾಳಜಿ ವಹಿಸುವುದಿಲ್ಲ, ಅವರ ಏಕೈಕ ಜನಾದೇಶ ಸರ್ವಾಧಿಕಾರ. . (ಅವರು) ಹಿಟ್ಲರ್‌ಗಿಂತ ಹೆಚ್ಚು" ಪಶ್ಚಿಮ ಬಂಗಾಳ ಸಿಎಂ ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟರ್ ವಿರುದ್ಧ ಆಪಾದಿತ ತೆರಿಗೆ ವಂಚನೆಯ ತನಿಖೆಯ ಭಾಗವಾಗಿ ತೆರಿಗೆ ಇಲಾಖೆಯು ಮಂಗಳವಾರ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಬುಧವಾರವೂ ಐಟಿ ಕಾರ್ಯಾಚರಣೆ ಮುಂದುವರಿದಿದೆ.

SCROLL FOR NEXT