ದೇಶ

ಋತುಚಕ್ರದ ರಜೆ ಕೋರಿ ಮನವಿ: ಫೆಬ್ರುವರಿ 24 ರಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ

Ramyashree GN

ನವದೆಹಲಿ: ಭಾರತದಾದ್ಯಂತ ಎಲ್ಲಾ ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಫೆಬ್ರುವರಿ 24 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಸಲ್ಲಿಸಿದ ಮನವಿಯನ್ನು ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರ ಪೀಠದ ಮುಂದೆ ಉಲ್ಲೇಖಿಸಲಾಗಿದೆ.

ತ್ರಿಪಾಠಿ ಅವರು ತಮ್ಮ ಮನವಿಯಲ್ಲಿ, 'ಮುಟ್ಟಿನ ಅವಧಿಯನ್ನು ಸಮಾಜ, ಸರ್ಕಾರ ಮತ್ತು ಇತರರಿಂದ ಹೆಚ್ಚಾಗಿ ಕಡೆಗಣಿಸಲಾಗಿದೆ. ಆದರೆ, ಕೆಲವು ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಮಾನ್ಯತೆ ನೀಡಿವೆ. ಉಳಿದ ರಾಜ್ಯಗಳಲ್ಲಿ ಮಹಿಳೆಯರಿಗೆ ಋತುಚಕ್ರದ ನೋವಿನ ರಜೆ ಅಥವಾ ಮುಟ್ಟಿನ ರಜೆಯನ್ನು ನಿರಾಕರಿಸುವುದು ಸಂವಿಧಾನದ 14ನೇ ಪರಿಚ್ಛೇದದ ಅಡಿಯಲ್ಲಿ ಅವರ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ' ಎಂದು ತಿಳಿಸಿದ್ದಾರೆ.

'ತಾಯ್ತನದ ವಿವಿಧ ಭಾಗಗಳಲ್ಲಿ ಅಥವಾ ಹಂತಗಳಲ್ಲಿ ಮಹಿಳೆಯರು ಋತುಚಕ್ರದ ಅವಧಿ, ಗರ್ಭಧಾರಣೆ, ಗರ್ಭಪಾತ ಅಥವಾ ಹೆರಿಗೆಯ ಈ ಹಂತಗಳಿಗೆ ಸಂಬಂಧಿಸಿದ ಯಾವುದೇ ವೈದ್ಯಕೀಯ ತೊಡಕುಗಳಿಗೆ ಒಳಗಾಗಿ ಹಲವಾರು ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೆ ಒಳಗಾಗುತ್ತಾರೆ' ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಾಸಿಕ ರಜೆಯನ್ನು ಕೋರುವುದರ ಜೊತೆಗೆ ವಕೀಲ ತ್ರಿಪಾಠಿ ಅವರು ತಮ್ಮ ಮನವಿಯಲ್ಲಿ, ಹೆರಿಗೆ ಪ್ರಯೋಜನ ಕಾಯ್ದೆ 1961ರ ಸೆಕ್ಷನ್ 14ರ ಅನುಸಾರವಾಗಿ ಕೆಲಸದ ಸ್ಥಳಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗದ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆಗಾಗಿ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

'ಮುಟ್ಟಿನ ನೋವಿನ ರಜೆಯ ಪರಿಕಲ್ಪನೆಯನ್ನು ಪರಿಹರಿಸಲು ಶಾಸಕಾಂಗದ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ. ಯುನೈಟೆಡ್ ಕಿಂಗ್‌ಡಮ್, ಚೀನಾ, ಜಪಾನ್, ತೈವಾನ್, ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಜಾಂಬಿಯಾ ಸೇರಿದಂತೆ ಇತರ ಹಲವಾರು ದೇಶಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದ್ದು, ಮುಟ್ಟಿನ ರಜೆಯನ್ನು ನೀಡಲಾಗುತ್ತಿದೆ. ಹೀಗಾಗಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆ ವಹಿಸಬೇಕು' ಎಂದು ಮನವಿಯಲ್ಲಿ ಹೇಳಲಾಗಿದೆ.

SCROLL FOR NEXT