ದೇಶ

ರಾಹುಲ್ ಗಾಂಧಿ ವಿಮಾನಕ್ಕೆ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಣೆ: ಸುಳ್ಳು ಹೇಳಿಕೆ ನೀಡಿದ ಅಜಯ್ ರೈ ವಿರುದ್ಧ ಪ್ರಕರಣ

Ramyashree GN

ವಾರಾಣಸಿ: ಈ ವಾರದ ಆರಂಭದಲ್ಲಿ ರಾಹುಲ್ ಗಾಂಧಿ ಅವರ ವಿಮಾನವನ್ನು ಇಲ್ಲಿ ಇಳಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಅಜಯ್ ರೈ ವಿರುದ್ಧ ಇಲ್ಲಿನ ಫುಲ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಬಬತ್‌ಪುರ ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಪಾಠಕ್ ಹೇಳಿಕೆ ಆದರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಂಗಳವಾರ ರಾಹುಲ್ ಗಾಂಧಿ ಅವರ ವಿಮಾನ ಆಗಮನದ ಬಗ್ಗೆ ಮಾಹಿತಿ ಇತ್ತು ಆದರೆ, ವಿಮಾನವು ಕೇರಳದ ಕಣ್ಣೂರಿನಿಂದ ಹಿಂತಿರುಗಿ ನೇರವಾಗಿ ದೆಹಲಿಗೆ ಹೋಗಲಿದೆ ಎಂಬ ಸಂದೇಶವನ್ನು ಕಿನ್ನೌರ್‌ನ ಏರ್ ಟ್ರಾಫಿಕ್ ಕಂಟ್ರೋಲರ್‌ ಸ್ವೀಕರಿಸಿದೆ ಎಂದು ಪಾಠಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆ ದಿನ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ರಾಯ್ ಅವರು, ರಾಹುಲ್ ಗಾಂಧಿ ಅವರ ವಿಮಾನಕ್ಕೆ ವಾರಾಣಸಿ ವಿಮಾನ ನಿಲ್ದಾಣದ ಅಧಿಕಾರಿಗಳು "ಕೊನೆಯ ಕ್ಷಣದಲ್ಲಿ" ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಿದರು. ಇದರಿಂದಾಗಿ ಅವರು ದೆಹಲಿಗೆ ಹೋಗಬೇಕಾಯಿತು ಎಂದು ಆರೋಪಿಸಿದರು.

ಪ್ರಯಾಗರಾಜ್‌ನ ಕಮಲಾ ನೆಹರು ಆಸ್ಪತ್ರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಇಲ್ಲಿಗೆ ಬರುತ್ತಿದ್ದರು ಎಂದು ರೈ ಹೇಳಿದ್ದರು.

'ಪ್ರಕರಣಗಳನ್ನು ದಾಖಲಿಸುವುದಕ್ಕೆ ನಾನು ಹೆದರುವುದಿಲ್ಲ. ಬಿಜೆಪಿ ಸರ್ಕಾರದ ಮುಖವಾಡವನ್ನು ಕಿತ್ತೊಗೆಯುವುದು ಅಗತ್ಯವಾಗಿದೆ. ಬಿಜೆಪಿ ಸರ್ಕಾರದ ಆಡಳಿತದ ಒತ್ತಡದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಪ್ರಕರಣಗಳು ದಾಖಲಾಗಿದ್ದವು ಎಂದರು.

ರೈ ಅವರು ಬಿಜೆಪಿಯೊಂದಿಗೆ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದರು ಮತ್ತು ವಾರಾಣಸಿಯಿಂದ ಐದು ಬಾರಿ ಶಾಸಕರಾಗಿದ್ದರು. ಬಳಿಕ 2012ರಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿ ವಿಫಲರಾಗಿದ್ದರು.

SCROLL FOR NEXT