ದೇಶ

ಕೋಲ್ಕತ್ತಾ: ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸ್ ನಾಪತ್ತೆ, 4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು

Ramyashree GN

ಕೋಲ್ಕತ್ತಾ: ಗುರುವಾರ ಶಾಲೆಯೊಂದರಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ತುಂಡುಗಳನ್ನು ವಿದ್ಯಾರ್ಥಿಗಳಿಗೆ ಹಾಕಿಲ್ಲ. ಕೋಳಿಯ ಎಲ್ಲಾ ಉತ್ತಮ ಭಾಗಗಳನ್ನು ತಮಗಾಗಿ ಶಿಕ್ಷಕರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿರುವ ಘಟನೆ ಮಾಲ್ಡಾ ಜಿಲ್ಲೆಯ ಇಂಗ್ಲಿಷ್‌ಬಜಾರ್ ಪ್ರದೇಶದ ಅಮೃತಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಿಕ್ಷಕರ ವಿರುದ್ಧ ಕೋಪಗೊಂಡ ಪೋಷಕರು ಗುರುವಾರ ಅವರನ್ನು ಕೊಠಡಿಯಲ್ಲಿ ಬೀಗ ಹಾಕಿದರು.

ಪೋಷಕರ ಆರೋಪದ ಮೇರೆಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಶಿಕ್ಷಕರು ಕೋಳಿ ಮಾಂಸದಿಂದ ಎಲ್ಲಾ ಕಾಲಿನ ತುಂಡುಗಳು ಮತ್ತು ಇತರ ಮಾಂಸದ ಭಾಗಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಕುತ್ತಿಗೆ, ಯಕೃತ್ತು ಮತ್ತು ಹೊಟ್ಟೆ ಭಾಗವನ್ನು ನೀಡಿದ್ದಾರೆ ಎಂದು ಪೋಷಕರು ಸಂಸ್ಥೆಯ ಆವರಣಕ್ಕೆ ನುಗ್ಗಿದ್ದಾರೆ. ಕೋಳಿ ಮಾಂಸವನ್ನು ಮಧ್ಯಾಹ್ನದ ಊಟದ ಭಾಗವಾಗಿ ನಿಗದಿಪಡಿಸಿದ ದಿನದಂದು ಶಿಕ್ಷಕರು 'ಪಿಕ್ನಿಕ್ ಮೂಡ್'ನಲ್ಲಿರುತ್ತಾರೆ ಮತ್ತು ಉತ್ತಮ ಗುಣಮಟ್ಟದ ಅಕ್ಕಿಯನ್ನು ಬಳಸಿ ಪ್ರತ್ಯೇಕವಾಗಿ ಬೇಯಿಸಿಕೊಳ್ಳುತ್ತಾರೆ ಎಂದು ಅವರು ಆರೋಪಿಸಿದರು.

ಚಿಕನ್ ಕರಿ ನೀಡಲು ನಿಗದಿಪಡಿಸಿದ ದಿನಗಳಲ್ಲಿ ವಿದ್ಯಾರ್ಥಿಗಳು ನಿರಾಶೆಯಿಂದ ಮನೆಗೆ ಹಿಂದಿರುಗಿದಾಗ ಮಾಲ್ಡಾ ಶಾಲೆಯಲ್ಲಿ ಉತ್ತಮ ಚಿಕನ್ ಅನ್ನು ತಾವಿಟ್ಟುಕೊಂಡು, ಉಳಿದಿದ್ದನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಎಂದು ದೂರಿದರು. 

'ವಿದ್ಯಾರ್ಥಿಗಳ ಪೋಷಕರು ಮತ್ತು ಪಾಲಕರು ಶಾಲೆಗೆ ಬಂದು ಶಿಕ್ಷಕರ ಬಳಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ವೇಳೆ ಎರಡೂ ಕಡೆಯವರು ವಾಗ್ವಾದ ನಡೆಸಿದ್ದಾರೆ. ಬಳಿಕ ಪೋಷಕರು ಆರು ಶಿಕ್ಷಕರನ್ನು ಬಲವಂತವಾಗಿ ಕೊಠಡಿಗೆ ಕರೆದೊಯ್ದು ಹೊರಗಿನಿಂದ ಬಾಗಿಲು ಹಾಕಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಶಿಕ್ಷಕರನ್ನು ಕೂಡಿ ಹಾಕಲಾಗಿತ್ತು.

ನಂತರ ಪೊಲೀಸರು ಮಧ್ಯಪ್ರವೇಶಿಸಿ ಶಿಕ್ಷಕರನ್ನು ಬಿಡುಗಡೆಗೊಳಿಸಿದರು. ಉತ್ತಮ ಗುಣಮಟ್ಟದ ಅಕ್ಕಿ ಮತ್ತು ಚಿಕನ್ ಲೆಗ್ ಪೀಸ್ ಬಳಸಿ ಶಿಕ್ಷಕರು ಪ್ರತ್ಯೇಕವಾಗಿ ಅಡುಗೆ ಮಾಡುತ್ತಿದ್ದಾರೆ ಎಂಬ ಆರೋಪವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಲು ಶಾಲೆಯ ಉಸ್ತುವಾರಿ ಶಿಕ್ಷಕರು ನಿರಾಕರಿಸಿದ್ದಾರೆ. 

ಸ್ಥಳೀಯ ಗ್ರಾಪಂ ಸದಸ್ಯ ನಿಖಿಲ್ ಸಿಂಘ ಮಾತನಾಡಿ, ‘ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಪೂರೈಸುವ ಆಹಾರದಿಂದ ಶಿಕ್ಷಕರು ಅವರನ್ನು ವಂಚಿತರನ್ನಾಗಿ ಮಾಡುತ್ತಿರುವುದು ವಿಷಾದನೀಯ’ ಎಂದರು. 

ಜಿಲ್ಲಾ ಪ್ರಾಥಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷೆ ಬಸಂತಿ ಬರ್ಮನ್, ಶಾಲಾ ಇನ್ಸ್‌ಪೆಕ್ಟರ್ (ಪ್ರಾಥಮಿಕ) ಅವರನ್ನು ತನಿಖೆ ನಡೆಸಲು ಕೇಳಲಾಗಿದೆ ಎಂದರು.

SCROLL FOR NEXT