ದೇಶ

ಹೈದರಾಬಾದ್: ವರದಕ್ಷಿಣೆಯಾಗಿ 'ಹಳೆಯ' ಪೀಠೋಪಕರಣ ನೀಡಿದಕ್ಕೆ ಮದುವೆ ರದ್ದುಗೊಳಿಸಿದ ವರ!

Lingaraj Badiger

ಹೈದರಾಬಾದ್: ವಧುವಿನ ಮನೆಯವರು ವರದಕ್ಷಿಣೆಯಾಗಿ "ಹಳೆಯ" ಪೀಠೋಪಕರಣಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ವರ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ವರ ಭಾನುವಾರ ನಡೆಯಬೇಕಿದ್ದ ಮದುವೆಗೆ ಬಾರದ ಹಿನ್ನೆಲೆಯಲ್ಲಿ ವಧುವಿನ ತಂದೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಧುವಿನ ತಂದೆ, ನಾವು ವರನ ಮನೆಗೆ ಹೋದಾಗ ವರನ ಪೋಷಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಬೇಡಿಕೆ ಇಟ್ಟಿದ್ದ ಸಾಮಾನುಗಳನ್ನು ನೀಡಿಲ್ಲ ಮತ್ತು ಪೀಠೋಪಕರಣಗಳು ಹಳೆಯದಾಗಿವೆ ಎಂದು ಅವರು ಹೇಳಿದರು ಎಂದು ದೂರಿದ್ದಾರೆ.

ನಾನು ಮದುವೆ ಔತಣಕೂಟವನ್ನು ಏರ್ಪಡಿಸಿದ್ದೆ. ಸಂಬಂಧಿಕರು ಮತ್ತು ಅತಿಥಿಗಳನ್ನು ಆಹ್ವಾನಿಸಿದ್ದೆ. ಆದರೆ ಸಮಾರಂಭಕ್ಕೆ ವರ ಬರಲಿಲ್ಲ ಎಂದು ವಧುವಿನ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ವರನ ಕುಟುಂಬದವರು ವರದಕ್ಷಿಣೆಯಾಗಿ ಇತರ ವಸ್ತುಗಳ ಜೊತೆಗೆ ಪೀಠೋಪಕರಣಗಳನ್ನು ನಿರೀಕ್ಷಿಸಿದ್ದರು. ಆದರೆ ಬಳಸಿದ ಪೀಠೋಪಕರಣಗಳನ್ನು ವಧುವಿನ ಮನೆಯವರು ನೀಡಿದ್ದರಿಂದ ವರನ ಮನೆಯವರು ಅದನ್ನು ತಿರಸ್ಕರಿಸಿದರು ಮತ್ತು ಮದುವೆಯ ದಿನದಂದು ಮದುವೆಗೆ ಬರಲಿಲ್ಲ ಎಂದು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಸಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT