ದೇಶ

ಅವರು ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವುದಿಲ್ಲ, ಅದೆಲ್ಲವೂ ಗಿಮಿಕ್ ಅಷ್ಟೇ: ಫಾರೂಖ್ ಅಬ್ದುಲ್ಲಾ

Srinivas Rao BV

ಶ್ರೀನಗರ: ವಿಧಾನಸಭಾ ಚುನಾವಣೆಯ ಬಳಿಕ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷರಾಗಿರುವ ಫಾರೂಕ್ ಅಬ್ದುಲ್ಲಾ, ಅವರು ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವುದಿಲ್ಲ. ಅದೆಲ್ಲವೂ ಗಿಮಿಕ್ ಅಷ್ಟೇ ಎಂದು ಹೇಳಿದ್ದಾರೆ. 

ಅವರು ನಮ್ಮನ್ನು ಹಾಗೂ ಇಡೀ ಜಗತ್ತನ್ನು ಮೂರ್ಖರನ್ನಾಗಿಸಲು ಬಯಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಅವರು ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವುದಿಲ್ಲ. ನಾವು ಅವರ ಆದೇಶಗಳನ್ನು ಮೌನವಾಗಿ ಗಮನಿಸುತ್ತಿದ್ದೇವೆ ಎಂದು ಶ್ರೀನಗರದ ಲೋಕಸಭಾ ಸಂಸದ ಅಬ್ದುಲ್ಲಾ ಹೇಳಿದ್ದಾರೆ. 

ಗುಲಾಮ ರಾಷ್ಟ್ರ ಏನನ್ನು ತಾನೇ ಮಾಡೀತು? ನಾವು ಏನನ್ನು ಮಾಡಲು ಸಾಧ್ಯ? ನಾವು ಮೌನವಾಗಿ ಗಮನಿಸುತ್ತಿದ್ದೇವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಭಾರತ ಸರ್ಕಾರವೇನಾದರೂ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಹಾಗೂ ಡೀಲಿಮಿಟೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರೆ, ಚುನಾವಣೆಯನ್ನೇಕೆ ನಡೆಸುತ್ತಿಲ್ಲ? ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ, ಜಮ್ಮು-ಕಾಶ್ಮೀರದಲ್ಲೇಕೆ ಚುನಾವಣೆ ನಡೆಯುತ್ತಿಲ್ಲ? ಎಂದು ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಇಲ್ಲೇಕೆ ಲೆಫ್ಟಿನೆಂಟ್ ಗೌರ್ನರ್ ನ್ನು ನೇಮಕ ಮಾಡಲಾಗಿದೆ? ಹಾಗೂ ಪ್ರತಿಯೊಂದಕ್ಕೂ ಅವರೇ ಮಾಸ್ಟರ್ ಆಗಿದ್ದಾರೆ? ಇದು ಯೋಚಿಸಬೇಕಾದ ವಿಷಯ ಎಂದು ಅಬ್ದುಲ್ಲಾ ಹೇಳಿದ್ದಾರೆ.
 

SCROLL FOR NEXT