ದೇಶ

ವಿಧಾನಸಭೆ ಚುನಾವಣೆ: ಕರ್ನಾಟಕ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯ ಪ್ರದೇಶಕ್ಕೆ ಕೇಜ್ರಿವಾಲ್ ಭೇಟಿ

Lingaraj Badiger

ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂದಿನ ತಿಂಗಳು ಕರ್ನಾಟಕ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು, ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಈ ರಾಜ್ಯಗಳಲ್ಲಿ ಪಕ್ಷದ ಪರ ಪ್ರಚಾರ ಆರಂಭಿಸಲಿದ್ದಾರೆ.

ಆಮ್ ಆದ್ಮಿ ಪಕ್ಷದ(ಎಎಪಿ) ಮೂಲಗಳ ಪ್ರಕಾರ, ಕೇಜ್ರಿವಾಲ್ ಅವರು ಮಾರ್ಚ್ 4 ರಂದು ಕರ್ನಾಟಕದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಪ್ರಸ್ತುತ ಭಾರತೀಯ ಜನತಾ ಪಕ್ಷ(ಬಿಜೆಪಿ) ಆಳ್ವಿಕೆ ನಡೆಸುತ್ತಿರುವ ದಕ್ಷಿಣ ರಾಜ್ಯ ಕರ್ನಾಟಕದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

ದೆಹಲಿ ಸಿಎಂ ಕೇಜ್ರಿವಾಲ್ ಅವರು ಛತ್ತೀಸ್‌ಗಢಕ್ಕೂ ಭೇಟಿ ನೀಡಲಿದ್ದು, ಮಾರ್ಚ್ 5 ರಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಎಎಪಿಯ ಚುನಾವಣಾ ಕಹಳೆ ಮೊಳಗಿಸಲಿದ್ದಾರೆ.

ಮಾರ್ಚ್ 13 ರಂದು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಪರ ಪ್ರಚಾರವನ್ನು ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಎಪಿ ನಾಯಕ ಮಾರ್ಚ್ 14 ರಂದು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳು ಈ ವರ್ಷದ ಕೊನೆಯಲ್ಲಿ ನಡೆಯುವ ನಿರೀಕ್ಷೆಯಿದೆ.

"ಕೇಜ್ರಿವಾಲ್ ಕ್ರಮವಾಗಿ ಮಾರ್ಚ್ 4, ಮಾರ್ಚ್ 5, ಮಾರ್ಚ್ 13 ಮತ್ತು ಮಾರ್ಚ್ 14 ರಂದು ಕರ್ನಾಟಕ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

SCROLL FOR NEXT