ದೇಶ

ಮಾರ್ಚ್ 4 ರವರೆಗೆ ಮನೀಶ್ ಸಿಸೋಡಿಯಾ ಸಿಬಿಐ ವಶಕ್ಕೆ: ದೆಹಲಿ ಕೋರ್ಟ್

Srinivasamurthy VN

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು  ದೆಹಲಿ ನ್ಯಾಯಾಲಯ ಮಾರ್ಚ್ 4 ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ.

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು 5 ದಿನಗಳ ಅಂದರೆ ಮಾರ್ಚ್ 4 ವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಈಗ ರದ್ದುಪಡಿಸಲಾಗಿರುವ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಬಂಧಿಸಿತ್ತು. ಸಿಸೋಡಿಯಾ ಅವರನ್ನು ಇಂದು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ರೋಸ್ ಅವೆನ್ಯೂ ಕೋರ್ಟ್ ಸಂಕೀರ್ಣದ ಒಳಗೆ ಮತ್ತು ಹೊರಗೆ ಭಾರೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್‌ಪಾಲ್ ಅವರು ಸಿಸೋಡಿಯಾ ಅವರ ಕಸ್ಟಡಿ ವಿಚಾರಣೆಗೆ ಸಿಬಿಐ ಸಲ್ಲಿಸಿದ ಮನವಿಯನ್ನು ಅಂಗೀಕರಿಸಿದರು. ಇದಕ್ಕೂ ಮೊದಲು ಸಿಬಿಐ ಮತ್ತು ಸಿಸೋಡಿಯಾ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯವು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. 2021-22ಕ್ಕೆ ಈಗ ರದ್ದಾದ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಸಂಜೆ ಸಿಸೋಡಿಯಾ ಅವರನ್ನು ಬಂಧಿಸಿದೆ.

ಸಿಸೋಡಿಯಾ ಪರ ವಕೀಲರ ವಾದಕ್ಕೆ ಸಿಬಿಐ ವಿರೋಧ
ಇನ್ನು ಮನೀಷ್ ಸಿಸೋಡಿಯಾ ಪರ ವಕೀಲರ ವಾದವನ್ನು ವಿರೋಧಿಸಿದ ಸಿಬಿಐ, ಯಾವುದೇ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ. ದೆಹಲಿಯ ಬಂಧಿತ ಉಪಮುಖ್ಯಮಂತ್ರಿ ಅವರು ಅಬಕಾರಿ ನೀತಿ ವಿಷಯದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ, ಆದರೆ ಅವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ವಿಚಾರಣೆಗಾಗಿ ಸಿಸೋಡಿಯಾ ಅವರ ಕಸ್ಟಡಿ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

SCROLL FOR NEXT