ದೇಶ

ಕೋವಿಡ್ ಆತಂಕ: ಚೀನಾ ಸೇರಿ 5 ದೇಶಗಳಿಂದ ಬರುವ ಪ್ರಯಾಣಿಕರಿಗೆ ಇಂದಿನಿಂದ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ!

Manjula VN

ನವದೆಹಲಿ: ಕೋವಿಡ್-19 ವಿಶ್ವದಾದ್ಯಂತ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್, ಥೈಲ್ಯಾಂಡ್ ಮತ್ತು ಸಿಂಗಾಪುರದಿಂದ ಆಗಮಿಸುವ ಪ್ರಯಾಣಿಕರಿಗೆ ಭಾನುವಾರದಿಂದ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥೈಲ್ಯಾಂಡ್‌ ದೇಶಗಳಲ್ಲಿ ಕೋರೋನಾ ಹೆಚ್ಚಾಗಿದ್ದು, ಈ ದೇಶಗಳಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ಈ ಆದೇಶ ಅನ್ವಯವಾಗಲಿದೆ. ಜೊತೆಗೆ ತಮ್ಮ ದೇಶದಲ್ಲಿ ಪ್ರಯಾಣಿಸುವ ಮುನ್ನ ಮೊದಲು 'ಏರ್ ಸುವಿಧಾ' ಪೋರ್ಟಲ್ ನೆಗಟಿವ್ ವರದಿಯನ್ನು ಕಡ್ಡಾಯವಾಗಿ ಹಾಕಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಈ ದೇಶಗಳಿಂದ ಬರುವವರು ಪರೀಕ್ಷೆಯ ನೆಗೆಟಿವ್‌ ವರದಿಯ ಬಗ್ಗೆ ಏರ್‌ ಸುವಿಧಾ ಪೋರ್ಟಲ್‌ ಮೂಲಕ ಸ್ವಯಂ ಘೋಷಣೆಯ ಅರ್ಜಿಯನ್ನು ಸಲ್ಲಿಸಿದ ನಂತರವಷ್ಟೇ ಚೆಕ್‌ ಇನ್‌ ಸಮಯದಲ್ಲಿ ಬೋರ್ಡಿಂಗ್‌ ಪಾಸ್‌ ವಿತರಿಸುವಂತೆ ಎಲ್ಲಾ ಏರ್‌ಲೈನ್ಸ್‌ಗಳಿಗೆ ಸೂಚಿಸಲಾಗಿದೆ. ಪ್ರಯಾಣ ಆರಂಭಿಸುವ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ಮಾತ್ರ ಮಾನ್ಯವಾಗಲಿದೆ.

ಭಾರತದಂತೆ ಯುಕೆ, ಫ್ರಾನ್ಸ್‌, ಸ್ಪೇನ್‌ ಸರ್ಕಾರಗಳು ಕೂಡ ಚೀನಾದಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಕಡ್ಡಾಯ ಮಾಡಿವೆ. ಇನ್ನೊಂದೆಡೆ, ಕೊರೋನಾ ಪ್ರಕರಣಗಳ ಬಗ್ಗೆ ನೈಜ ವರದಿಯನ್ನು ಪ್ರತಿದಿನ ಬಿಡುಗಡೆ ಮಾಡುವಂತೆ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ಸೂಚಿಸಿದೆ.

SCROLL FOR NEXT