ದೇಶ

ಮಹಾ ಎಂಎಲ್‌ಸಿ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ತಂಬೆ ಕಾಂಗ್ರೆಸ್ ನಿಂದ ಅಮಾನತು

Lingaraj Badiger

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸತ್ಯಜೀತ್ ತಂಬೆ ಅವರನ್ನು ಕಾಂಗ್ರೆಸ್ ಗುರುವಾರ ಅಮಾನತು ಮಾಡಿದೆ.

ನಾಸಿಕ್ ವಿಭಾಗದ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತಂಬೆ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಹೆಸರಿಸಿದ್ದರೂ ವಿಧಾನ ಪರಿಷತ್ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ಸತ್ಯಜೀತ್ ತಂಬೆ ಅವರ ತಂದೆ ಸುಧೀರ್ ತಂಬೆಯನ್ನು ಪಕ್ಷದಿಂದ ಅಮನಾತುಗೊಳಿಸಿದ ಕೆಲವೇ ದಿನಗಳಲ್ಲೂ ಮಗನನ್ನು ಅಮಾನತುಗೊಳಿಸಲಾಗಿದೆ.

"ಮಹಾರಾಷ್ಟ್ರ ವಿಧಾನ ಪರಿಷತ್ತಿನ ನಾಸಿಕ್ ವಿಭಾಗದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನೀವು ಬಂಡಾಯವೆದ್ದಿದ್ದೀರಿ. ಇದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ರಾಜ್ಯ ಅಧ್ಯಕ್ಷ ನಾನಾ ಪಟೋಲೆ ಅವರ ಆದೇಶದಂತೆ ನಿಮ್ಮನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೇವಾನಂದ್ ಪವಾರ್ ಅವರು ಸತ್ಯಜೀತ್ ತಂಬೆ ಅವರಿಗೆ ಪತ್ರ ಬರೆದಿದ್ದಾರೆ.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಟೋಲೆ ಅವರು ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಐದು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರ ಮತ್ತು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT