ದೇಶ

ಮುಂಬೈ: ಎರಡು ಹೊಸ ಮೆಟ್ರೋ ಮಾರ್ಗ ಉದ್ಘಾಟಿಸಿ, ರೈಲಿನಲ್ಲಿ ಸಂಚರಿಸಿದ ಪ್ರಧಾನಿ ಮೋದಿ

Nagaraja AB

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಎರಡು ನೂತನ ಮೆಟ್ರೋ ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಅಂಧೇರಿಯಿಂದ ದಹಿಸರ್ ವರೆಗೆ 35 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ 2ಎ ಮತ್ತು 7 ಮಾರ್ಗವನ್ನು ಸುಮಾರು 12, 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ನೆರವೇರಿಸಿದರು. 

ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ದಹಿಸರ್ ಇ ಮತ್ತು ಡಿಎನ್ ನಗರ ಸಂಪರ್ಕಿಸುವ 2ಎ ಮಾರ್ಗ (ಹಳದಿ ಮಾರ್ಗ) ಸುಮಾರು 18.6 ಕಿ.ಮೀ ಉದ್ದವಿದ್ದರೆ, ಅಂಧೇರಿ ಇ ಮತ್ತು ದಹಿಸರ್  ಸಂಪರ್ಕದ ಕೆಂಪು ಮಾರ್ಗ 7 ಸುಮಾರು 16. 5 ಕಿ.ಮೀ ಉದ್ದವಿದೆ. ಈ ಮಾರ್ಗಗಳಿಗೆ 2015ರಲ್ಲಿ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ಮೆಟ್ರೋ ರೈಲುಗಳನ್ನು ದೇಶದಲ್ಲಿಯೇ ತಯಾರಿಸಲಾಗಿದೆ. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಮುಂಬೈ 1 ಮೊಬೈಲ್ ಆ್ಯಪ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಮುಂಬೈ 1) ಅನ್ನು ಸಹ ಬಿಡುಗಡೆ ಮಾಡಿದರು. ಮೊಬೈಲ್ ಆ್ಯಪ್ ಪ್ರಯಾಣಿಕರಿಗೆ ಅನುಕೂಲವಾಗಲಿದೆ.  ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲಿ ಇವುಗಳನ್ನು ತೋರಿಸಿ  ಯುಪಿಎ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. 

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಗಳನ್ನು  (ಮುಂಬೈ 1)  ಆರಂಭದಲ್ಲಿ ಮೆಟ್ರೋ ಕಾರಿಡಾರ್‌ಗಳಲ್ಲಿ ಬಳಸಲಾಗುತ್ತಿದ್ದು, ತದನಂತರ ಸ್ಥಳೀಯ ರೈಲುಗಳು ಮತ್ತು ಬಸ್ ಗಳಿಗೂ ವಿಸ್ತರಿಸಲಾಗುತ್ತಿದೆ. ನಂತರ ಮೆಟ್ರೋ ರೈಲಿನಲ್ಲಿ ಸಂಚರಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. 

SCROLL FOR NEXT