ದೇಶ

ಅಪಪ್ರಚಾರದ ತುಣಕು: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಕೇಂದ್ರ ಕಿಡಿ

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು 'ಪಕ್ಷಪಾತಿ ಧೋರಣೆಯುಳ್ಳ ಅಪಪ್ರಚಾರದ ತುಣಕು' ಎಂದು ಕಿಡಿಕಾರಿದೆ.

ಎರಡು ಭಾಗಗಳಲ್ಲಿ ಮೂಡಿ ಬಂದಿರುವ ಬಿಬಿಸಿ ಸಾಕ್ಷ್ಯ ಚಿತ್ರ ಇಂಡಿಯಾ: ದಿ ಮೋದಿ ಕ್ವಶ್ಚನ್ ನಲ್ಲಿ 2002 ರ ಗುಜರಾತ್ ಗಲಭೆ ವಿಚಾರದಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯನ್ನು  ಹೊಣೆಗಾರರನ್ನಾಗಿ ಮಾಡಲಾಗಿದೆ.

ಬಿಬಿಸಿಯ ಸಾಕ್ಷ್ಯಚಿತ್ರ ಪಕ್ಷಪಾತಿಯಾಗಿದ್ದು, ವಸ್ತುನಿಷ್ಠತೆ ಕೊರತೆಯಿಂದ ಕೂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಡೆಸಿದ ಪಿತೂರಿ. ಈ ಚಿತ್ರಕ್ಕೆ ಯಾವುದೇ ಯೋಗ್ಯತೆ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಹೇಳಿದ್ದಾರೆ.

ಇಂದು ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅರಿಂದಮ್ ಬಾಗ್ಚಿ ಅವರು, ಬ್ರಿಟನ್ ನ ಕೆಲವು ಆಂತರಿಕ ವರದಿಗಳನ್ನು ಆಧರಿಸಿದ ಈ ಸಾಕ್ಷ್ಯಚಿತ್ರ ಪ್ರದರ್ಶನವು ವಸಾಹತುಶಾಹಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಮರ್ಥನೆ:

ಇನ್ನು ಈ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ಸಮರ್ಥಿಸಿಕೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ಗುಜರಾತ್ ಗಲಭೆ ಬಗ್ಗೆ ಬ್ರಿಟನ್ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ದೀರ್ಘಕಾಲೀಕವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ಹೇಳಿದ್ದಾರೆ.

"ಖಂಡಿತವಾಗಿಯೂ, ನಾವು ಎಲ್ಲಿಯೂ ಕಿರುಕುಳವನ್ನು ಸಹಿಸುವುದಿಲ್ಲ. ಆದರೆ ಪ್ರಧಾನಿ ಮೋದಿ ಅವರ ಪಾತ್ರವನ್ನು ನಾನು ಒಪ್ಪುತ್ತೇನೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಬ್ರಿಟಿಷ್ ಪ್ರಧಾನಿ ಹೇಳಿದ್ದಾರೆ.

ಈ ಸಾಕ್ಷ್ಯಚಿತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯ ಲಾರ್ಡ್ ರಮಿ ರೇಂಜರ್ ಅವರು, ಬಿಬಿಸಿ ಪಕ್ಷಪಾತಿ ವರದಿಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

SCROLL FOR NEXT