ದೇಶ

ಮತ್ತೆ ಅವಳಿ ಹೆಣ್ಣು ಮಕ್ಕಳ ಜನನ: ಮನನೊಂದು ವೈಗಂಗಾ ನದಿಗೆ ಹಾರಿ ತಂದೆ ಆತ್ಮಹತ್ಯೆ!

Vishwanath S

ಭೋಪಾಲ್(ಮಧ್ಯಪ್ರದೇಶ): ಅವಳಿ ಹೆಣ್ಣು ಮಕ್ಕಳ ಜನನದ ನಂತರ ತಂದೆಯೊಬ್ಬ ವೈಗಂಗಾ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಮೃತರನ್ನು ದಿನಿಪುಣಿ ನಿವಾಸಿ ವಾಸುದೇವ್ ಪಟ್ಲೆ(35) ಎಂದು ಗುರುತಿಸಲಾಗಿದೆ. ವಾಸುದೇವ್ ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಮೂರನೇ ಹೆರಿಗೆಯಲ್ಲಿ ಪತ್ನಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು ಇದರಿಂದ ಕಂಗಾಲಾಗಿ ವಾಸುದೇವ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ವರಸಿವಾಣಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಿಪುಣಿ ಗ್ರಾಮದಲ್ಲಿ ಕಳೆದ ಬುಧವಾರ ಸಂಜೆ 6.30ಕ್ಕೆ ಈ ಘಟನೆ ನಡೆದಿದೆ. ಇಲ್ಲಿ ಯುವಕನೊಬ್ಬ ಮೊಬೈಲ್ ನಲ್ಲಿ ಮಾತನಾಡುತ್ತಾ ವೈಗಂಗಾ ನದಿಗೆ ಹಾರಿದ್ದಾನೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗೃಹ ರಕ್ಷಕ ದಳ ರಾತ್ರಿ ಎರಡು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತ್ತೆ ಹುಡುಕಾಟ ಆರಂಭಿಸಿದ್ದು ಮಧ್ಯಾಹ್ನ 12 ಗಂಟೆಗೆ ರಕ್ಷಣಾ ತಂಡ ಯುವಕನ ಮೃತದೇಹ ಪತ್ತೆಯಾಗಿದೆ.

ವಾಸುದೇವ್ ಗೆ ಈಗಾಗಲೇ ಆಸ್ತಾ (6) ಮತ್ತು ಅಮಾಲಿ (4) ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಆತನ ಸಂಬಂಧಿ ರಾಜಾರಾಮ್ ಪಟ್ಲೆ ತಿಳಿಸಿದ್ದಾರೆ. ಬುಧವಾರ ಜಿಲ್ಲಾ ಆಸ್ಪತ್ರೆಯಲ್ಲಿ ಅವರ ಪತ್ನಿ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಅಂದಿನಿಂದ ಆತ ಒತ್ತಡದಲ್ಲಿದ್ದ ಎಂದು ರಾಜಾರಾಮ್ ಪಟ್ಲೆ ತಿಳಿಸಿದ್ದಾರೆ.

ವಾಸುದೇವ್ ಅವರ ತಂದೆ ತಾಯಿಗೆ ಒಬ್ಬನೇ ಮಗ. ವಾಸುದೇವ್ ಅವರ ಹೆಸರಿನಲ್ಲಿ 14 ಎಕರೆ ಕೃಷಿ ಭೂಮಿ ಇದ್ದು, ಅದರಲ್ಲಿ ವರ್ಷಕ್ಕೆ ಎರಡು ಬಾರಿ ಬೆಳೆ ಹಾಕುತ್ತಿದ್ದರು. ಅಲ್ಲದೆ ಟೈಲ್ಸ್ ಮತ್ತು ಮಾರ್ಬಲ್ ಅಳವಡಿಸುವ ಕೆಲಸ ಮಾಡುತ್ತಿದ್ದರು. ಮೆಕ್ಯಾನಿಕ್ ಕೆಲಸದಲ್ಲಿ ದಿನಕ್ಕೆ ಸುಮಾರು 500 ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ವಾಸುದೇವ್ ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನ ಮೂಡಿಸಿದೆ.

SCROLL FOR NEXT