ದೇಶ

ಕೇರಳದ ಇಬ್ಬರು ಮಕ್ಕಳಲ್ಲಿ 'ನೊರೋವೈರಸ್' ಸೋಂಕು ಪತ್ತೆ!

Manjula VN

ನವದೆಹಲಿ: ಕೇರಳದ ಇಬ್ಬರು ಮಕ್ಕಳಲ್ಲಿ ನೊರೋವೈರಸ್ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇರಳ ಸರ್ಕಾರವು ಮಾಹಿತಿ ನೀಡಿದೆ.

ಕಾಕ್ಕನಾಡ ಶಾಲೆಯ ಒಂದು ಹಾಗೂ ಎರಡನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ನೊರೋವೈರಸ್ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನೊರೋವೈರಸ್‌ ಸೋಂಕು ಗ್ಯಾಸ್ಟ್ರೋಎಂಟರೈಟಿಸ್ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ ಅಥವಾ ವಾಂತಿ ಮತ್ತು ಕೆಲವೊಮ್ಮೆ ಜ್ವರ ಲಕ್ಷಣಗಳನ್ನು ಹೊಂದಿರುತ್ತದೆ.

ಶಾಲೆಯ ಒಟ್ಟು 62 ಮಕ್ಕಳು ಮತ್ತು ಕೆಲವು ಪೋಷಕರಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಪರೀಕ್ಷೆ ವೇಳೆ, ಇಬ್ಬರು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಮಕ್ಕಳಿಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಬಂದ್ ಆಗಿರುವ ಶಾಲೆಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.

ಮಕ್ಕಳು ಮತ್ತು ಪೋಷಕರಿಗೆ ನಾವು ಆನ್‌ಲೈನ್ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಕ್ಲಾಸ್ ರೂಮ್ ಮತ್ತು ಟಾಯ್ಲೆಟ್‌ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಕೇರಳ ರಾಜ್ಯದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಕೂಡ ಇದೇ ರೀತಿಯಲ್ಲಿ ಕೇರಳದಲ್ಲಿ ನೊರೋವೈರಸ್ ಪತ್ತೆಯಾಗಿತ್ತು. ತಿರುವನಂಥಪುರಂನ ವಿಳಿಂಜಮ್‌ನ ಶಾಲೆಯ ಮಕ್ಕಳಲ್ಲಿ ನೊರೊವೈರಸ್ ಕಂಡು ಬಂದಿತ್ತು.

SCROLL FOR NEXT